ಉತ್ತರ ಕರ್ನಾಟಕದ ಔಟ್ಸ್ಯಾಂಡಿಂಗ್ ಕಾಂಕ್ರೀಟ್ ಟೀಚರ್ಪ್ರಶಸ್ತಿಗೆ ಡಾ.ಸುರೇಶ ಪಾಟೀಲ ಆಯ್ಕೆ

ಕಲಬುರಗಿ,ಅ.28: ನಗರದ ಶರಣಬಸವ ವಿಶ್ವವಿದ್ಯಾಲಯದ ಸಿವಿಲ್ ಇಂಜನೀಯರಿಂಗ್ (ಕೋ- ಎಡ್) ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಸುರೇಶ ಪಾಟೀಲರು ಹುಬ್ಬಳ್ಳಿ-ಧಾರವಾಡ ಸೆಂಟರ್ ಇಂಡಿಯನ್ ಕಾಂಕ್ರೀಟ್ ಇನ್ಸ್ಟಿಟ್ಯೂಟ್ ಉತ್ತರ ಕರ್ನಾಟಕ ವಿಭಾಗದವರು ಕೊಡಮಾಡುವ ಈ ವರ್ಷದ ಉತ್ತರ ಕರ್ನಾಟಕದ ಔಟ್ಸ್ಯಾಂಡಿಂಗ್ ಕಾಂಕ್ರೀಟ್ ಟೀಚರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದೇ ತಿಂಗಳ 29 ರಂದು ನಮ್ಮ ಕಲಬುರಗಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಡಾ.ಸುರೇಶ ಪಾಟೀಲರು 1985 ರಲ್ಲಿ ನಗರದ ಪ್ರತಿಷ್ಠಿತ ಪೂಜ್ಯ ದೊಡ್ಡಪ್ಪ ಅಪ್ಪ ಕಾಲೇಜಿನಿಂದ ಇಂಜನೀಯರಿಂಗ್ ಪದವಿ, 1991ರಲ್ಲಿ ಎಮ್. ಟೆಕ್ ಹಾಗೂ 2007 ಡಾಕ್ಟರೇಟ್ ಪದವಿಗಳನ್ನು ಐಐಟಿ ದೆಹಲಿಯಿಂದ ಪಡೆದು 36 ವರ್ಷಗಳ ತಮ್ಮ ಸುದೀರ್ಘ ಹಾಗೂ ಅತ್ಯಮೂಲ್ಯ ಸೇವೆಯನ್ನು ಪಿ ಡಿ ಎ ಕಾಲೇಜಿನ ಸಿವಿಲ್ ಇಂಜನೀಯರಿಂಗ್ ವಿಭಾಗಕ್ಕೆ ಸಲ್ಲಿಸಿ, 2021ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ತದನಂತರ ನಗರದ ಶರಣಬಸವ ವಿಶ್ವವಿದ್ಯಾಲಯದ ಸಿವಿಲ್ ಇಂಜನೀಯರಿಂಗ್ (ಕೋ- ಎಡ್) ವಿಭಾಗದ ಪ್ರಾಧ್ಯಾಪಕರಾಗಿ ಸೇವೆಯನ್ನು ಮುಂದುವರಿಸಿದ್ದಾರೆ. ಅವರ ಸೇವಾ ಅವಧಿಯಲ್ಲಿ ವಿಭಾಗದ ಅನೇಕ ಗುರುತರ ಜವಾಬ್ದಾರಿಗಳನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸುವುದರ ಜೊತೆಗೆ ವಿಭಾಗದ ಬೆಳವಣಿಗೆಗೆ ಸುಮಾರು 46 ಲಕ್ಷ ರೂಪಾಯಿಗಳ ಆರ್ಥಿಕ ಅನುದಾನಗಳನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಸದಾಕಾಲ ಎಲೆಮರೆಯ ಕಾಯಿ ಯಂತೆ ಅವರು ತಮ್ಮ ಕಾಯಕದಲ್ಲಿ ನಿರತರಾಗಿದ್ದರೂ ಕೂಡ ಅವರ ಅಮೂಲ್ಯ ಸೇವೆ ಹಾಗೂ ವಿಶೇಷ ಸಾಧನೆಗಳ ಕಾರಣಕ್ಕಾಗಿ ಈಗಾಗಲೇ ಅನೇಕ ಪ್ರಶಸ್ತಿಗಳು ಅವರ ಮುಡಿಗೇರಿವೆ. ಅದರಲ್ಲೂ ವಿಶೇಷವಾಗಿ ಪಿಡಿಎ ಕಾಲೇಜಿನ ಬೆಸ್ಟ್ ಪರ್ಫಾಮಿರ್ಂಗ್ ಟೀಚರ್ ಪ್ರಶಸ್ತಿ ಹಾಗೂ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜ್ಯುಕೇಶನ್ ವತಿಯಿಂದ ಪ್ರಭಾವತಿ ಶಾಹಿ ಮೆಮೋರಿಯಲ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು ಗಮನಾರ್ಹ ಸಂಗತಿ.