
ಸಂಜೆವಾಣಿ ವಾರ್ತೆ,
ವಿಜಯಪುರ, ಏ. ೨: ಡಾ.ಶಿವಕುಮಾರ ಸ್ವಾಮೀಜಿ ಅವರು ಅನ್ನ, ಅಕ್ಷರ, ಜ್ಞಾನ ಎಂಬ ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ,ಸಮಾಜಕ್ಕೆ ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದ ಕಾಯಕಯೋಗಿ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡ ಡಾ.ಶಿವಕುಮಾರ ಸ್ವಾಮಿಗಳ ೧೧೯ ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಪೂಜ್ಯರ ಜೀವನ ಸಂದೇಶಗಳನ್ನು ನಾವು ಅನುಸರಿಸಿ ಸದ್ಗತಿಯಿಂದ ಸತ್ಯಜೀವನ ನಡೆಸಬೇಕು. ಬೆಳೆದ ಕೈಗಳಿಂದ ಹಸಿದ ಹೊಟ್ಟೆಗೆ ಉಣಬಡಿಸುವ ಸೇತುವೆಯಾಗಿ ಅವರು ಸದಾ ದಾಸೋಹ ಪ್ರಜ್ಞೆಯ ಪ್ರತೀಕವಾಗಿದ್ದರು. ಅವರು
ಬಸವಾದಿ ಶರಣರ ತತ್ವವನ್ನು ಪಾಲಿಸುತ್ತಾ, ನಡೆ-ನುಡಿಯಲ್ಲಿ ಸಮಚಿತ್ತದಿಂದ ಆದರ್ಶ ಬದುಕನ್ನು ಬಾಳಿ, ಸಮಾಜದ ಆಧ್ಯಾತ್ಮಿಕ ಉನ್ನತಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.
ಶಿಕ್ಷಕ ಸಚಿನ ಅವಟಿ ಮಾತನಾಡಿ, ಬಡವರು, ದೀನರು, ಶೋಷಿತರಿಗೆ ತ್ರಿವಿಧ ದಾಸೋಹ ನೀಡುವ ಮೂಲಕ ಲಕ್ಷಾಂತರ ಕುಟುಂಬಗಳಲ್ಲಿ ಆರದ ಮಹಾಜ್ಯೋತಿಯಾದ ಡಾ.ಶಿವಕುಮಾರ ಸ್ವಾಮೀಜಿ ಅವರು ತಿಳಿಸಿದ ಬದುಕಿನ ನೀತಿ, ಸಂದೇಶವನ್ನು ಎಲ್ಲರೂ ಪಾಲಿಸುವ ಮೂಲಕ ಅತ್ಯುತ್ತಮ ಜೀವನ ಕಟ್ಟಿಕೊಳ್ಳಲು ಸಲಹೆ ನೀಡಿದರು.
ಗ್ರಾಮದ ಭೀರದೇವರ ಪಟ್ಟದ ಗುರುಗಳಾದ ಗೂಳಪ್ಪ ಪೂಜಾರಿ ಸಾನ್ನಿಧ್ಯ ವಹಿಸಿದ್ದರು. ಪಿಕೆಪಿಎಸ್ ಉಪಾಧ್ಯಕ್ಷ ಪ್ರಭಾಕರ ಅರಕೇರಿ, ಹನಮಂತ ಬಕಾಟಿ, ರಾಮಚಂದ್ರ ಚೌಧರಿ, ವೀರೇಶ ಹುಣಶ್ಯಾಳ, ಪಿಗ್ಮಿ ಏಜೆಂಟ್ ಮಂಜುನಾಥ ಹಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.




















