ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೨೨: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ ಮತ್ತು ಶರೀರ ರಚನಾಶಾಸ್ತ್ರ ವಿಜ್ಞಾನ ವಿಭಾಗದ ಡಿಸ್ಟಿಂಗ್ವಿಶ್ ಚೇರ್ ಪ್ರೊಫೆಸರ್ ಡಾ. ಕುಸಾಲ ದಾಸ ಅವರಿಗೆ ೨೦೨೫ನೇ ವರ್ಷದ ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ.
ಡಾ. ರಾಘವೇಂದ್ರ ಕುಲಕರ್ಣಿ ಅವರು ಔಷಧ ವಿಜ್ಞಾನ ಮತ್ತು ಪಾಲಿಮರ್ ಕ್ಷೇತ್ರ ಹಾಗೂ ಡಾ. ಕುಸಾಲ ದಾಸ ಅವರು ಶರೀರ ರಚನಾಶಾಸ್ತ್ರ ಕ್ಷೇತ್ರದಲ್ಲಿ ಕೈಗೊಂಡಿರುವ ಸಂಶೋಧನೆಯನ್ನು ಪರಿಗಣಿಸಿ ಈ ಸ್ಥಾನ ಲಭಿಸಿದೆ.
ಅಮೆರಿಕದ ಸ್ಟ್ಯಾನಫೋರ್ಡ್ ವಿಶ್ವವಿದ್ಯಾಲಯ ಮತ್ತು ನೆದರಲ್ಯಾಂಡಿನ ಎಲ್ಸವಿಯರ್ ಸಂಸ್ಥೆ ಪ್ರತಿವರ್ಷ ಸೈಟೇಷನ್ ಇಂಡೆಕ್ಸ್ ಆಧಾರದ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ವಿಜ್ಞಾನಿಗಳನ್ನು ಗುರುತಿಸಿ ವಿಶ್ವದ ಶ್ರೇಷ್ಠ ೨% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಕಲ್ಪಿಸುತ್ತದೆ.
ಡಾ. ರಾಘವೇಂದ್ರ ಕುಲಕರ್ಣಿ ಅವರು ಸತತ ೫ನೇ ಬಾರಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಅವರು ಪಾಲಿಮರ್ ಆಧಾರಿತ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಿರುವ ಭಾರತದ ಸಂಶೋಧಕರಲ್ಲಿ ೨೭ನೇ ಸ್ಥಾನ ಹಾಗೂ ಜಗತ್ತಿನ ೧೫೮ನೇ ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲ, ಅವರು ೧೩೪ ಸಂಶೋಧನೆ ಪ್ರಕಟಣೆಗಳನ್ನು ರಚಿಸಿದ್ದಾರೆ. ಅಲ್ಲದೇ, ೧೧ ಪೇಟೆಂಟ್ ಗಳನ್ನೂ ಪಡೆದಿದ್ದಾರೆ. ಇವರು ಸಂಶೋಧನೆಗಾಗಿ ರೂ. ೧೦೨.೦೨ ಕೋ. ಅನುದಾನವನ್ನೂ ಪಡೆದಿರುವುದು ಗಮನಾರ್ಹವಾಗಿದೆ.
ಡಾ. ಕುಸಾಲ ದಾಸ ಅವರು ಸತತ ೩ನೇ ಬಾರಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಶರೀರ ರಚನಾ ಶಾಸ್ತ್ರ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಿರುವ ಭಾರತದ ೨೬೭ನೇ ಮತ್ತು ವಿಶ್ವದ ೨೯೧೪ನೇ ಸ್ಥಾನ ಪಡೆದಿದ್ದಾರೆ. ಅವರು ೧೫೧ ಸಂಶೋಧನೆ ಪ್ರಕಟಣೆಗಳನ್ನು ರಚಿಸಿದ್ದಾರೆ. ಅಲ್ಲದೇ, ೪ ಪೇಟೆಂಟ್ ಗಳನ್ನೂ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಇವರು ಸಂಶೋಧನೆಗಾಗಿ ರೂ. ೧ ಕೋ. ಹೆಚ್ಚು ಅನುದಾನವನ್ನೂ ಪಡೆದಿದ್ದಾರೆ.
ಡಾ. ರಾಘವೇಂದ್ರ ಕುಲಕರ್ಣಿ ಮತ್ತು ಡಾ. ಕುಸಾಲ ದಾಸ ಅವರ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ. ಎಂ. ಪಾಟೀಲ, ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಅರುಣ ಚಂ. ಇನಾಮದಾರ ಹಾಗೂ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.

























