
ಯಾದಗಿರಿ :ಮಾ.೧೧: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಯಾದಗಿರಿ ಜಿಲ್ಲೆಯ ಡಾ. ನಿವೇದಿತಾ ಅವರ ಸಾಧನೆ ಜಿಲ್ಲೆಯಷ್ಟೇ ಅಲ್ಲದೆ ರಾಜ್ಯಕ್ಕೂ ಹೆಮ್ಮೆ ತಂದಿದೆ. ಕಠಿಣ ಪರಿಶ್ರಮ, ಶಿಸ್ತುಬದ್ಧ ಅಭ್ಯಾಸ ಮತ್ತು ದೃಢ ಸಂಕಲ್ಪದಿAದ ಅವರು ಈ ಮಹತ್ವದ ಸಾಧನೆ ಮಾಡಿದ್ದಾರೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ನಗರದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ಗ್ರಾಮೀಣ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿನಿಯಾಗಿದ್ದರೂ ಡಾ. ನಿವೇದಿತಾ ಅವರು ನಿರಂತರ ಪರಿಶ್ರಮದ ಮೂಲಕ ದೇಶದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಯಾದ ಯುಪಿಎಸ್‌ಸಿಯಲ್ಲಿ ಯಶಸ್ಸು ಸಾಧಿಸಿರುವುದು ಇತರ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆಯಾಗಿದೆ ಎಂದು ಹೇಳಿದರು.
ಯುವಕರು ತಮ್ಮ ಗುರಿಯನ್ನು ಸ್ಪಷ್ಟವಾಗಿ ನಿಗದಿಪಡಿಸಿಕೊಂಡು ನಿರಂತರ ಅಭ್ಯಾಸದೊಂದಿಗೆ ಮುಂದುವರಿದರೆ ಯಾವುದೇ ಗುರಿಯನ್ನಾದರೂ ಸಾಧಿಸಬಹುದು. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಂಡರೆ ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ನಿವೇದಿತಾ ಅವರ ಸಾಧನೆಯನ್ನು ಅಭಿನಂದಿಸಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ದೇವರಾಜ ಮಸ್ಕನಳ್ಳಿ, ಸಿದ್ರಾಮಪ್ಪ ಹಳಿಗೇರಾ, ಸೇರಿದಂತೆ ಡಾ. ನಿವೇದಿತಾ ಅವರ ಪೋಷಕರಾದ ಚಂದಪ್ಪ ಬಾವಿಮನಿ, ವಿಜಯಲಕ್ಷ್ಮಿ ಬಾವಿಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





















