Home ಜಿಲ್ಲೆ ಕಲಬುರಗಿ ಭಾಷಾ ಸೌಹಾರ್ದಕ್ಕೆ ಡಾ. ಲಕ್ಷ್ಮಣ ಭೋಸಲೆ ಕರೆ

ಭಾಷಾ ಸೌಹಾರ್ದಕ್ಕೆ ಡಾ. ಲಕ್ಷ್ಮಣ ಭೋಸಲೆ ಕರೆ

ಕಲಬುರಗಿ:ಹಿಂದಿ ಭಾಷೆಯ ಮಹತ್ವ, ಭಾರತೀಯ ಭಾಷಾ ವೈವಿಧ್ಯದಲ್ಲಿ ಹಿಂದಿ ಭಾಷೆಯ ಸ್ಥಾನ ವಿಶೇಷವಾಗಿದೆ. ಎಲ್ಲ ಭಾಷೆಗಳ ನಡುವಿನ ಸೌಹಾರ್ದತೆಗೆ ಹಿಂದಿ ಸಾಕ್ಷಿಯಾಗಿದೆ ಎಂದು ಲಕ್ಷ್ಮಣ ಭೋಸಲೆಯವರು ಹೇಳಿದರು.
ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ರಂದು ಹಿಂದಿ ವಿಭಾಗದ ವತಿಯಿಂದ ಹಿಂದಿ ದಿವಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಕಮಲಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಲಕ್ಷ್ಮಣ ಭೋಸಲೆ ಅವರು ಮಾತನಾಡುತ್ತಾ ಭಾಷೆ ಕೇವಲ ಸಂವಹನದ ಸಾಧನವಲ್ಲ; ಅದು ಒಂದು ಸಮಾಜದ ಸಂಸ್ಕøತಿ, ಚಿಂತನೆ ಮತ್ತು ಭಾವಲೋಕವನ್ನು ಪ್ರತಿಬಿಂಬಿಸುವ ಶಕ್ತಿಯುತ ಮಾಧ್ಯಮವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಮಲ್ಲಿನಾಥ ಎಸ್. ತಳವಾರ ಅವರು ಮಾತನಾಡಿ, ಭಾರತೀಯ ಭಾಷೆಗಳ ನಡುವಿನ ಪರಸ್ಪರ ಗೌರವ ಮತ್ತು ಸೌಹಾರ್ದದ ಅಗತ್ಯವನ್ನು ಪ್ರತಿಪಾದಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯರ ಡಾ. ದಯಾನಂದ ಎಂ. ಶಾಸ್ತ್ರಿಯವರು ಅಧ್ಯಕ್ಷತೆವಹಿಸಿ ಹಿಂದಿ ಭಾಷೆಯ ಇತಿಹಾಸ, ಬೆಳವಣಿಗೆ, ಸಾಹಿತ್ಯಿಕ ಶ್ರೀಮಂತಿಕೆ ಹಾಗೂ ರಾಷ್ಟ್ರಮಟ್ಟದ ಸಂವಹನದಲ್ಲಿ ಅದರ ಪಾತ್ರದ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಹಿಂದಿ ವಿಭಾಗದ ಪ್ರಾಧ್ಯಾಪಕಿ ಡಾ. ರೋಹಿಣಿ ಸಿಂಧೆಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಆಲ್ಫಿಯಾ ನಿರೂಪಿಸಿದರು. ವಿದ್ಯಾರ್ಥಿ ಹಾಜಿ ವಂದನೆ ಸಲ್ಲಿಸಿದರು.