
ಬೆಂಗಳೂರು.ಮೇ೩೧:ವಿದ್ಯಾರ್ಥಿಗಳಿಗೆ ಸಾಧಕರ ಬದುಕು ಪ್ರೇರಣೆಯಾಗಬೇಕು. ಭವ್ಯ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಬೇಕು ಎಂದು ಪದ್ಮಶ್ರೀ ಡಾ. ವಿಜಯಲಕ್ಷ್ಮಿ ದೇಶಮಾನೆ ಹೇಳಿದ್ದಾರೆ.
ನಗರದ ಡಾ.ಎಚ್.ಎನ್.ನ್ಯಾಷನಲ್ ಕಾಲೇಜ್ ಆಫ್ ಎಂಜಿನಿಯರಿಂಗ್ ಪ್ರಥಮ ಸೆಮಿಸ್ಟರ್ನಲ್ಲಿ ಸಾಧನೆಗೈದ ೨೭೨ ವಿದ್ಯಾರ್ಥಿಗಳನ್ನು ಗೌರವಿಸಿ, ಡೀನ್ ಸಾಧಕರು, ಡಾ. ಆನಿ ಬೆಸಂಟ್ ಹಾಗೂ ಸಂಪತ್ಗಿರಿ ರಾವ್ ಪುರಸ್ಕಾರಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ನ್ಯಾಷನಲ್ ಕಾಲೇಜಿನ ಪರಂಪರೆ ಮಹೋನ್ನತವಾದದ್ದು. ವಿಶೇಷವಾಗಿ ಡಾ. ಎಚ್. ನರಸಿಂಹಯ್ಯ ಅವರ ದೃಷ್ಟಿಕೋನ ಮತ್ತು ಜೀವನ ನಮಗೆ ಮಾರ್ಗದರ್ಶವಾಗಿದೆ. ಅವರು ವಿದ್ಯಾರ್ಥಿಗಳನ್ನು ಸದಾ ಪ್ರಭಾವಿಸಿದ ಮಹಾನ್ ಚೇತನ ಎಂದರು.
ನ್ಯಾಷನಲ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಡಾ. ಎಚ್.ಎನ್. ಸುಬ್ರಹ್ಮಣ್ಯ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ, ಪಠ್ಯೇತರ ಚಟುವಟಿಕೆಗಳು ಪೂರಕವಾಗಿವೆ. ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಯಶಸ್ಸನ್ನು ಉತ್ಸವದ ರೀತಿಯಲ್ಲಿ ಆಚರಿಸುತ್ತೇವೆ. ಪ್ರತಿಯೊಂದು ಹಂತದಲ್ಲಿ ಅವರ ಶ್ರೇ ಯೋಭಿವೃದ್ಧಿಗೆ ಒತ್ತು ನೀಡುತ್ತೇವೆ ಎಂದರು.
ಎನ್‌ಇಎಸ್ನ ಗೌರವ ಕಾರ್ಯದರ್ಶಿ ಹಾಗೂ ಡಾ. ಎಚ್‌ಎನ್‌ಎನ್ಸಿಇ ಅಧ್ಯಕ್ಷ ವಿ. ವೆಂಕಟಶಿವರೆಡ್ಡಿ ಮಾತನಾಡಿ, ವಿದ್ಯಾರ್ಥಿ ಸಬಲೀಕರಣ ಇಂದಿನ ಅಗತ್ಯವಾಗಿದ್ದು, ಶಿಕ್ಷಕರು ನಿಜವಾದ ಮಾರ್ಗದರ್ಶಕರು. ಉತ್ತಮ ಗುರುವಿದ್ದರೆ ಭವಿಷ್ಯ ಉಜ್ವಲವಾಗಲಿದೆ ಎಂದರು.
ಡಾ. ಎಚ್‌ಎನ್‌ಎನ್ಸಿಇ ಯ ಮುಖ್ಯ ಮಾರ್ಗದರ್ಶಕ ಡಾ. ಕೆ.ಎನ್.ಬಿ. ಮೂರ್ತಿ, ಖಜಾಂಚಿ ತಲ್ಲಂ ಆರ್. ದ್ವಾರಕನಾಥ್, ಗೌರವ ಕಾರ್ಯದರ್ಶಿ ಬಿ.ಎಸ್. ಅರುಣ್ ಕುಮಾರ್, ಎನ್‌ಇಎಸ್ ಅಧ್ಯಕ್ಷ ಡಾ. ಪಿ.ಎಲ್. ವೆಂಕಟರಾಮರೆಡ್ಡಿ, ವರ್ಕ್ಸ್ ಕಮಿಟಿ ಅಧ್ಯಕ್ಷ ಜಿ.ಎಂ. ರವೀಂದ್ರ, ಪ್ರಾಂಶುಪಾಲ ಡಾ. ಸಿ. ವಿಜಯಲಕ್ಷ್ಮಿ, ಎನ್ಸಿಜೆ ಪ್ರಾಂಶುಪಾಲ ಪ್ರೊ. ಮಾಮತಾ, ಎನ್ಸಿಜೆಪಿಯು ಸಂಯೋಜಕರಾದ ಪ್ರೊ. ಅಲಕನಂದಾ, ಸಂಯೋಜಕಿ, ಡಾ. ಎಚ್‌ಎನ್‌ಎನ್ಸಿಇ ಉಪ ಪ್ರಾಂಶುಪಾರಾದ ಡಾ. ನಂದೀಶ್ ಮತ್ತಿತರರು ಉಪಸ್ಥಿತರಿದ್ದರು.