ಕಾಯಕ ಗ್ರಾಮ ಕಾರ್ಯಕ್ರಮಕ್ಕೆ ಜಿಪಂ ಸಿಇಓ ಡಾ.ಗಿರೀಶ ಬದೋಲೆ ಚಾಲನೆ

ಬೀದರ, ನ.03: ಬೀದರ ತಾಲೂಕಿನ ಕಾಡವಾದ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚಿಗೆ ಕಾಯಕ ಗ್ರಾಮ ಕಾರ್ಯಕ್ರಮಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಚಾಲನೆ ನೀಡಿದರು.
ನಂತರ ಮಾತನಾಡಿ, ನಾವು ಎಲ್ಲರೂ ಒಟ್ಟಾಗಿ “ಕಾಯಕ ಗ್ರಾಮ ಕಾರ್ಯಕ್ರಮ” ಎಂಬ ಮಹತ್ವದ ಉದ್ದೇಶಕ್ಕಾಗಿ ಇಲ್ಲಿ ಸೇರಿದ್ದೇವೆ. ನಮ್ಮ ರಾಜ್ಯ ಸರ್ಕಾರವು ಗ್ರಾಮೀಣಾಭಿವೃದ್ಧಿಯನ್ನು ವೇಗಗೊಳಿಸಲು, ಸ್ವಾವಲಂಬಿ ಮತ್ತು ಸಶಕ್ತ ಗ್ರಾಮವನ್ನು ನಿರ್ಮಿಸಲು ಈ ಯೋಜನೆಯನ್ನು ರೂಪಿಸಿದೆ. ಈ ಕಾಯಕ ಗ್ರಾಮ ಕಾರ್ಯಕ್ರಮವು ಗ್ರಾಮದ ಸಂಪೂರ್ಣ ಅಭಿವೃದ್ದಿ-ಆರ್ಥಿಕ, ಸಾಮಾಜಿಕ, ಪರಿಸರ ಮತ್ತು ಸಾಂಸ್ಕøತಿಕ ಎಂಬ ಗುರಿಯನ್ನು ಹೊಂದಿದೆ ಎಂದರು.
ಈ ಕಾರ್ಯಕ್ರಮದಡಿಯಲ್ಲಿ ಗ್ರಾಮದಲ್ಲಿ ಮೂಲಸೌಕರ್ಯಗಳ ಸುಧಾರಣೆ, ಶುದ್ಧ ಕುಡಿಯುವ ನೀರು, ಸೌಕರ್ಯಯುತ ರಸ್ತೆ, ಸ್ಯಾನಿಟೇಷನ್, ಹಸಿರುಮಯ ಪರಿಸರ, ಮಹಿಳಾ ಶಕ್ತೀಕರಣ, ಯುವಕರ ಉದ್ಯೋಗಾವಕಾಶಗಳು ಮತ್ತು ಶಿಕ್ಷಣದ ಗುಣಮಟ್ಟದ ಏರಿಕೆ ಇತ್ಯಾದಿ ಅಂಶಗಳಿಗೆ ಆದ್ಯತೆ ನೀಡಲಾಗಿದೆ. “ಕಾಯಕವೇ ಕೈಲಾಸ” ಎಂಬ ನಮ್ಮ ಸನಾತನ ನಂಬಿಕೆಯಂತೆ, ಈ ಯೋಜನೆಯು ಕಾಯಕದ ಮೂಲಕ ಸಮೃದ್ಧಿ ಸಾಧಿಸುವ ದೃಷ್ಟಿಯನ್ನು ಪ್ರತಿ ಬಿಂಬಿಸುತ್ತದೆ. ಗ್ರಾಮದ ಪ್ರತಿಯೊಬ್ಬ ನಾಗರಿಕರ ಸಹಭಾಗಿತ್ವ, ಹೊಣೆಗಾರಿಕೆ ಮತ್ತು ಸೇವಾ ಮನೋಭಾವ ಈ ಯೋಜನೆಯ ಜೀವಾಳವೆಂದರು.
ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು, ಸ್ವಸಹಾಯ ಸಂಘದ ಮಹಿಳೆಯರು, ಯುವ ಸಂಘಗಳು, ಹಾಗೂ ಶಾಲಾ ಶಿಕ್ಷಕರು ಎಲ್ಲರೂ ಒಂದಾಗಿ ಈ ಕಾರ್ಯಕ್ಕೆ ಕೈಜೋಡಿಸಿದರೆ ನಮ್ಮ ಗ್ರಾಮವು ಮಾದರಿ “ಕಾಯಕ ಗ್ರಾಮ” ಆಗಿ ಬೆಳೆಯುವುದು ಖಚಿತ. ಈ ಕಾರ್ಯಕ್ರಮದ ಮೂಲಕ ನಾವು ಗ್ರಾಮದ ಅಭಿವೃದ್ದಿಗೆ ನಾವೇ ಹೊಣೆ, ನಾವೇ ನಾಯಕರು ಎಂಬ ಸಂದೇಶವನ್ನು ಸಾರುತ್ತೇವೆ. ನಮ್ಮ ಗ್ರಾಮದಲ್ಲಿ ಪ್ರತಿಯೊಬ್ಬ ಕುಟುಂಬಕ್ಕೂ ಸಂತೋಷ, ಸುರಕ್ಷತೆ ಮತ್ತು ಗೌರವಯುತ ಜೀವನ ದೊರಕಲಿ ಎಂಬುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಈ ಸಂದರ್ಭದಲ್ಲಿ ಕಾಡವಾದ ಗ್ರಾಪಂ ಅಧ್ಯಕ್ಷೆ ಶಶೀಕಲಾ ಬುಕ್ಕಿಗಾರ, ಉಪಾಧ್ಯಕ್ಷರಾದ ರವಿ ರಾಜಗೀರೆ, ಸಾಹಾಯಕ ನಿರ್ದೇಶಕರು (ಆಡಳಿತ) ಅಧಿಕಾರಿ ಜೈ ಪ್ರಕಾಶ ಚವ್ಹಾಣ, ಗ್ರಾಮ ಪಂಚಾಯತ್ ಸದಸ್ಯರು, ಹನುಮಂತ ಚಿದ್ರಿ, ಭ್ಯಾಗೇಶ ಎಸ್‍ಬಿಎಂ ಪಂಡಿತ ವಾಡೇಕರ, ಲೊಕೇಶ ಮೇತ್ರಿ, ಪಿಡಿಒ ಶಿವಕೂಮಾರ, ಶಾಲಾ ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.