
ಕಲಬುರಗಿ:ಜು.೨:ಇಡೀ ವಿಶ್ವದಲ್ಲಿಯೇ ಅದ್ಭುತವಾದ, ಬದುಕನ್ನು ಕಟ್ಟಿಕೊಡುವ ಶ್ರೇಷ್ಠವಾದ ವಚನ ಸಾಹಿತ್ಯವನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಅಮೂಲ್ಯವಾದಈ ಸಂಪತ್ತನ್ನು ದೊರೆಯುವಂತೆ ಮಾಡಿದ ವಚನಶಾಸ್ತç ಪಿತಾಮಹ ಡಾ.ಫ.ಗು.ಹಳಕಟ್ಟಿಯವರ ಕೊಡುಗೆ ಅವಿಸ್ಮರಣೀಯವಾಗಿದೆಯೆಂದು ಪ್ರಾಚಾರ್ಯ ರವೀಂದ್ರಕುಮಾರ ಸಿ.ಬಟಗೇರಿ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಜರುಗಿದ ‘ಡಾ.ಫ.ಗು.ಹಳಕಟ್ಟಿಯವರ ೧೪೫ನೇ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಮಾತನಾಡಿ, ಹಳಕಟ್ಟಿಯವರ ಸ್ಮರಣೆಯಲ್ಲಿಯೇ ಒಂದು ದೊಡ್ಡ ಅನುಭಾವವಿದೆ. ಅಂದಿನ ಕ್ಲಿಷ್ಟಕರ ಪರಿಸ್ಥಿಯಲ್ಲಿ ವಿನಾಶದ ಅಂಚಿನಲ್ಲಿದ್ದ ವಚನಗಳ ಹಸ್ತಪ್ರತಿಗಳನ್ನು ಸಂರಕ್ಷಿಸಿ, ಪ್ರಕಟಿಸಿ, ಪ್ರಚಾರಗೊಳಿಸುವ ಮೂಲಕ ಇಂತಹ ಅಮೂಲ್ಯವಾದ ವಚನ ಸಂಪತ್ತನ್ನು ನಮಗೆ ದೊರೆಯುವಂತೆ ಮಾಡುವ ಮೂಲಕ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಇಂತಹ ಮಹನೀಯರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಉತ್ತಮ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಅಸ್ಮಾ ಜಬೀನ್, ಸುವರ್ಣಲತಾ ಭಂಡಾರಿ, ಮಲ್ಲಿಕಾರ್ಜುನ ದೊಡ್ಡಮನಿ, ಶಂಕ್ರೆಪ್ಪ ಹೊಸದೊಡ್ಡಿ,ಮಲ್ಲಪ್ಪ ರಂಜಣಗಿ, ಗ್ರಂಥಪಾಲಕ ಲಿಂಗರಾಜ ಹಿರೇಗೌಡ, ಪ್ರದಸ ಪ್ರೇಮಾ ಸುರಪುರ, ಅತಿಥಿ ಉಪನ್ಯಾಸಕರಾದ ನಾರಾಯಣಸ್ವಾಮಿ, ಅಲೀಯಾ ತಬಸ್ಸುಮ್, ಸೇವಕ ಭಾಗಣ್ಣ ಹರನೂರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.