
ಭಾಲ್ಕಿ: ಬಾಲ್ಕಿಯ ಲಿಂಗೈಕ್ಯ ಡಾ. ಚೆನ್ನಬಸವ ಪಟ್ಟದ್ದೇವರು 1936ರಲ್ಲಿಯೇ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ನಾರಾಯಣಖೇಡ ತಾಲೂಕಿನ ಮೊರ್ಗಿ ಗ್ರಾಮದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದರು. ಶಿಕ್ಷಣ ಸಂಸ್ಥೆಯನ್ನು ನಡೆಸಲು ಪ್ರಸಾದ ನಿಲಯವನ್ನೂ ಆರಂಭಿಸಿ, ಮುಷ್ಟಿ ಫಂಡ್‍ನ ನೆರವಿನಿಂದ ಶಾಲೆ ಮತ್ತು ಪ್ರಸಾದ ನಿಲಯವನ್ನು ಸುಸೂತ್ರವಾಗಿ ನಡೆಸಿದರು. ಬಳಿಕ ಭಾಲ್ಕಿ ಹಾಗೂ ಬೀದರ್‍ನಲ್ಲಿಯೂ ಶಾಲಾ-ಕಾಲೇಜುಗಳನ್ನು ಆರಂಭಿಸಿ, ಅವುಗಳಿಗೆ ಸಿದ್ಧರಾಮೇಶ್ವರ, ಅಕ್ಕಮಹಾದೇವಿಯಂತಹ ಶಿವಶರಣರ ಹೆಸರುಗಳನ್ನು ಇಟ್ಟಿದ್ದು ಅವರ ಶರಣತತ್ವದ ಬದ್ಧತೆಗೆ ಸಾಕ್ಷಿಯಾಗಿದೆ. ಪಟ್ಟದ್ದೇವರು ಬಿತ್ತಿದ ಈ ಶಿಕ್ಷಣದ ಬೀಜ ಹೆಮ್ಮರವಾಗಿ ಬೆಳೆದು, ಅನೇಕ ಶಿಕ್ಷಣ ಸಂಸ್ಥೆಗಳ ಮೂಲಕ ಜ್ಞಾನಪ್ರಸಾರ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೊಳಲ್ಕೆ ಕೊಟ್ಟೆ ನಂಜಪ್ಪ ಅದಕ್ಕೆ ಗುರು ಕಾಲೇಜಿನ ಉಪನ್ಯಾಸಕ ಡಾ. ಜಿ.ವಿ. ಮಂಜುನಾಥ್ ಅಭಿಪ್ರಾಯ ಪಟ್ಟರು.
ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿರುವ ಅನುಭಾವ ಶ್ರಾವಣ : ಶರಣ ಚಿಂತನ ಮಾಲಿಕೆಯ ಒಂಬತ್ತನೇ ದಿನದ ಚಿಂತನಗೋಷ್ಠಿ ಶ್ರೀಮಠದ ಬಸವೇಶ್ವರ ಸಭಾಂಗಣದಲ್ಲಿ ನಡೆದ ಭಾಲ್ಕಿ ಹಿರೇಮಠದ ಲಿಂಗೈಕ ಡಾ. ಚೆನ್ನಬಸವ ಪಟ್ಟದೇವರ ವಿಷಯ ಕುರಿತು ಮಾತನಾಡಿದರು.
ಅಂದಿನ ಹೈದರಾಬಾದಿನ ನಿಜಾಮನ ಆಳ್ವಿಕೆಯಲ್ಲಿ ಆ ಭಾಗದಲ್ಲಿ ಕನ್ನಡ ಕಲಿಸುವುದೇ ಅಪರಾಧವಾಗಿದ್ದರೂ, ಪಟ್ಟದ್ದೇವರು ಕನ್ನಡದ ಉಳಿವಿಗಾಗಿ ಧೈರ್ಯದಿಂದ ಹೋರಾಡಿದರು. ಶಾಲೆಯ ಹೊರಗೆ ಉರ್ದು ನಾಮಫಲಕ ಅಳವಡಿಸಿ, ಒಳಗೆ ಕನ್ನಡವನ್ನು ಕಲಿಸುವ ಮೂಲಕ ಕನ್ನಡದ ಬಗೆಗಿನ ಅವರಲ್ಲಿದ್ದ ಅಭಿಮಾನದ ಜ್ಯೋತಿಯನ್ನು ಬೆಳಗಿಸಿದರು. ಹೀಗಾಗಿ ಅವರು “ಕನ್ನಡದ ಪಟ್ಟದ್ದೇವರು” ಎಂದೇ ಖ್ಯಾತರಾದರು. ಕನ್ನಡ ಭಾμÉಯ ಮೇಲಿನ ಅವರ ಪ್ರೀತಿ ಕೇವಲ ಅಭಿಮಾನವಾಗಿರದೆ, ಕನ್ನಡಿಗರ ಅಸ್ಮಿತೆಯ ರಕ್ಷಣೆಯ ಹೋರಾಟವಾಗಿತ್ತು.
ಪಟ್ಟದ್ದೇವರ ಬಸವತತ್ವದ ಆಚರಣೆಯೂ ಅನುಕರಣೀಯವಾಗಿತ್ತು. ಹಿಂದಿನ ತೆಲಂಗಾಣ ರಾಜ್ಯದ ನಾರಾಯಣಖೇಡ ತಾಲೂಕಿನ ನಾಗೂರು ಗ್ರಾಮದ ಹನುಮಾನ್ ದೇವಾಲಯದಲ್ಲಿ ನಡೆದ ಶಿವಾನುಭವ ಗೋಷ್ಠಿಯ ಸಂದರ್ಭದಲ್ಲಿ ಎಲ್ಲರೂ ಪ್ರಸಾದ ಸ್ವೀಕರಿಸಿದರೂ, ದಲಿತರು ಮಾತ್ರ ಮುಂದೆ ಬರಲು ಹಿಂದೇಟು ಹಾಕಿದರು. ಆಗ ಪಟ್ಟದ್ದೇವರು, “ನೀವು ಬಂದು ಪ್ರಸಾದ ಸ್ವೀಕರಿಸದೆ ಹೋದರೆ ನಾನು ಇಲ್ಲಿಂದ ಕದಲುವುದಿಲ್ಲ” ಎಂದು ದೃಢವಾಗಿ ನಿಂತರು. ಕೊನೆಗೆ ದಲಿತರೆಲ್ಲರೂ ಬಂದು ದೇವಾಲಯದ ಜಗಲಿ ಕಟ್ಟೆಯ ಮೇಲೆ ಕುಳಿತಿದ್ದ ಪೂಜ್ಯರಿಂದ ಪ್ರಸಾದ ಸ್ವೀಕರಿಸಿದರು. ಇದರಿಂದ ಕೆಲ ಮೇಲ್ವರ್ಗದವರು ಅಸಮಾಧಾನಗೊಂಡಾಗ, ಪಟ್ಟದ್ದೇವರು ಅಣ್ಣನವರ “ಇವನಾರವ, ಇವನಾರವ…” ಎಂಬ ವಚನದ ಆಶಯವನ್ನು ತಿಳಿಸಿ, ಬಸವತತ್ವದ ನಿಜವಾದ ಅರ್ಥವನ್ನು ಮನವರಿಕೆ ಮಾಡಿಕೊಟ್ಟರು. ಅμÉ್ಟೀ ಅಲ್ಲದೆ, ಪೂಜಾ ಕೊಠಡಿಯ ಸೇವಾ ಕಾರ್ಯಗಳಲ್ಲಿಯೂ ದಲಿತರನ್ನು ಒಳಗೊಳ್ಳುವ ಮೂಲಕ ಸಮಾನತೆ, ಸಹೋದರತ್ವ ಮತ್ತು ಕಾಯಕದ ಬಸವತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡರು.
ಕರ್ನಾಟಕ ಏಕೀಕರಣದ ಹೋರಾಟದಲ್ಲಿಯೂ ಲಿಂಗೈಕ್ಯ ಡಾ. ಚೆನ್ನಬಸವ ಪಟ್ಟದ್ದೇವರ ಪಾತ್ರ ಮಹತ್ವದ್ದಾಗಿದೆ. ಸಂಯುಕ್ತ ಕರ್ನಾಟಕ ಸಂಘವನ್ನು ರಚಿಸಿ, ಭೀಮಣ್ಣ ಖಂಡ್ರೆ ಮತ್ತು ಸಿದ್ದಲಿಂಗಪ್ಪ ಕಾಕನಡೆ ಅವರ ನೇತೃತ್ವದಲ್ಲಿ ಅಖಂಡ ಬೀದರ್ ಜಿಲ್ಲೆ ಕರ್ನಾಟಕದಲ್ಲಿಯೇ ಉಳಿಯಬೇಕೆಂಬ ಹೋರಾಟಕ್ಕೆ ಅವರು ಬಲ ತುಂಬಿದರು. ಅಂದಿನ ರಾಜಕೀಯ ಬೆಳವಣಿಗೆಗಳ ಪರಿಣಾಮವಾಗಿ ಅಖಂಡ ಬೀದರ್ ಜಿಲ್ಲೆಯ ಕೆಲವು ಭಾಗಗಳು ಮಾತ್ರ ಕರ್ನಾಟಕದಲ್ಲಿ ಉಳಿದರೂ, ಅವು ಕರ್ನಾಟಕದೊಂದಿಗೆ ಉಳಿಯಲು ಪಟ್ಟದ್ದೇವರು ಸೇರಿದಂತೆ ಹೋರಾಟಗಾರರು ನಡೆಸಿದ ನಿರಂತರ ಪ್ರಯತ್ನವನ್ನು ಮರೆಯಲಾಗದು.
ಶಿಕ್ಷಣ, ಕನ್ನಡ ಭಾμÉ, ಸಾಮಾಜಿಕ ಸಮಾನತೆ, ಬಸವತತ್ವ ಹಾಗೂ ಕರ್ನಾಟಕ ಏಕೀಕರಣ-ಈ ಎಲ್ಲ ಕ್ಷೇತ್ರಗಳಲ್ಲಿ ಡಾ. ಚೆನ್ನಬಸವ ಪಟ್ಟದ್ದೇವರು ಸಲ್ಲಿಸಿದ ಸೇವೆ ಅನನ್ಯ ಮತ್ತು ಚಿರಸ್ಮರಣೀಯ. ಕನ್ನಡದ ಉಳಿವಿಗಾಗಿ ನಿಜಾಮನ ಆಡಳಿತದ ನಿಬರ್ಂಧಗಳ ನಡುವೆಯೂ ಶಿಕ್ಷಣದ ಮೂಲಕ ಹೋರಾಡಿದ ಅವರು, ತಮ್ಮ ಬದುಕಿನ ಮೂಲಕವೇ ಬಸವತತ್ವವನ್ನು ಸಾಕಾರಗೊಳಿಸಿದ ಮಹಾನ್ ಶರಣರಾಗಿದ್ದಾರೆ ಎಂದು ಮಂಜುನಾಥ ಅವರು ಅಭಿಪ್ರಾಯಪಟ್ಟರು.
ಸಮಾರಂಭದ ಸಮ್ಮುಖ ವಹಿಸಿದ್ದ ಮುರುಘಾಮಠದ ಖಾಸಾ ಮಠವಾದ ಗುರುಮಠಕಲ್‍ನ ಶಾಂತವೀರಗುರು ಮುರುಘರಾಜೇಂದ್ರ ಸ್ವಾಮಿಗಳವರು ಮಾತನಾಡಿ, ಶ್ರೀಮಠದಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯುತ್ತಿರುವುದು ಐಕ್ಯತೆಯ ಪ್ರತಿಬಿಂಬ ಎಂದು ಹೇಳಿದರು. ಬೇರೆ ಬೇರೆ ಮಠಗಳ ಸ್ವಾಮೀಜಿಗಳವರ ಸ್ಮರಣೆ ಹಾಗೂ ಅವರ ವಿಚಾರಧಾರೆಗಳನ್ನು ಇಲ್ಲಿ ಸ್ಮರಿಸುತ್ತಿರುವುದು ಮುರುಘಾಮಠದ ಔದಾರ್ಯ ಹಾಗೂ ವೈಶಿಷ್ಟ್ಯವಾಗಿದೆ ಎಂದವರು ಅಭಿಪ್ರಾಯಪಟ್ಟರು.
ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿ ಈ ನಾಡಿಗೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸಲೇಬೇಕಾಗುತ್ತದೆ. ಅದು ಮುಂದಿನವರಿಗೆ ದಾರಿದೀಪವಾಗುತ್ತದೆ. ಅಂತಹ ಬಾಲ್ಕಿ ಚೆನ್ನಬಸವ ಪಟ್ಟದ್ದೇವರ ವಿಷಯವನ್ನು ಬಾಲ್ಯದಿಂದ ಲಿಂಗೈಕ್ಯದವರೆಗೂ ಅವರು ಮಾಡಿದ ಸಾಧನೆಯನ್ನು ಕೂಲಂಕುಶವಾಗಿ ಎಲ್ಲೂ ಎಡರು- ತೊಡರು ಇಲ್ಲದೆ ನಿರರ್ಗಳವಾಗಿ ಟಿಪ್ಪಣಿ ಇಲ್ಲದೆ ಉಪನ್ಯಾಸ ನೀಡಿದ ಮಂಜುನಾಥ್ ಅವರ ಪ್ರತಿಭೆ ಮೆಚ್ಚತ್ತಕ್ಕಂತದ್ದು. ಈ ನಾಡಿನಲ್ಲಿ ಬಸವ ತತ್ವವನ್ನು ತನ್ನ ಸ್ವಂತ ಕಾಯಕ ಎಂದು ತಪಸ್ಸಿನಂತೆ ನಿರ್ವಹಿಸಿದವರು ಶ್ರೀಗಳವರಲ್ಲಿ ಅನುμÁ್ಠನ, ಕನ್ನಡದ ಪ್ರತಿμÁ್ಠನ ಇವೆರಡೂ ಚೆನ್ನಬಸವ ಪಟ್ಟದ್ದೇವರ ಮೂಲ ಧ್ಯೇಯಗಳಾಗಿದವು. ಸಮರ್ಪಣಾ ಭಾವಕ್ಕೆ ಅವರಿಗೆ ಅವರೇ ಸಾಟಿ ಎಂದು ಉದಾಹರಿಸಿದರು. ಶ್ರೀ ಜಗದ್ಗುರು ಮುರುಘರಾಜೇಂದ್ರ ಗುರುಕುಲದ ಸಾಧಕರಾದ ಗಂಗಾಧರ ದೇವರು ಅವರು ಮುರುಘಾ ಪರಂಪರೆಯ ಮುರಿಗೆ ಶಾಂತಿವೀರ ಮಹಾಸ್ವಾಮಿಗಳ ಹಾಗೂ ಇತರ ಸ್ವಾಮಿಗಳವರ ಜೀವನ ಸಾಧನೆ ಕುರಿತಾಗಿ ಮಾತನಾಡಿದರು.
ವೇದಿಕೆಯಲ್ಲಿ ಬಸವಮುರುಘೇಂದ್ರ ಸ್ವಾಮಿಗಳವರು, ಹೊಳಲ್ಕೆರೆ ತಿಪ್ಪೇರುದ್ರ ಸ್ವಾಮಿಗಳವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಸಮಾಜ ,ಸಂಘಟನೆಗಳ ಪದಾಧಿಕಾರಿಗಳಾದ ಬಸವರಾಜ ಕಟ್ಟಿ, ಕಸವನಹಳ್ಳಿ ಶಿವಣ್ಣ, ಗಾಯತ್ರಿ ಶಿವರಾಂ ,ಬಸವರಾಜಯ್ಯ, ಡಾ.ಈಶ್ವರಪ್ಪ, ಎಂ.ಬಿ. ಮುರಳಿ, ಸುನಿತಾ ಸೇರಿದಂತೆ ಎಸ್. ಜೆ. ಎಮ್. ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳ , ಇತರ ಶಾಲಾ ಕಾಲೇಜುಗಳ ಸಿಬ್ಬಂದಿ ಉಪಸ್ಥಿತರಿದ್ದರು.
ಎಸ್ ಜೆ ಎಮ್ ಕಾನೂನು ಮಹಾ ವಿದ್ಯಾಲಯ ಎಸ್ ಜೆಎಮ್ ಕಲಾ ವಾಣಿಜ್ಯ ಮಹಾವಿದ್ಯಾಲಯಗಳ ನಿರ್ವಹಣೆಯಲ್ಲಿ ನಡೆದ ಸಮಾರಂಭಕ್ಕೆ ಕಲಾವಿದ ಉಮೇಶ್ ಪತ್ತಾರ್ ವಚನ ಗೀತೆ ಹಾಡಿದರು.ಉಪನ್ಯಾಸಕ ಕರಕಪ್ಪಮೇಟಿ ಸ್ವಾಗತಿಸಿದರೆ,ಮತ್ತೋರ್ವ ಉಪನ್ಯಾಸಕಿ ಶೈಲಜಾಶಿವಕುಮಾರ್ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಮಾಡಿದರು.






























