
ಬೀದರ್:ಜ.೧೯:
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಬೀದರ್ ಜಿಲ್ಲಾ ಸಂಪರ್ಕ ಕಚೇರಿಯಲ್ಲಿ, ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ವತಿಯಿಂದ ಲೋಕನಾಯಕ ಡಾ. ಶ್ರೀ ಭೀಮಣ್ಣ ಖಂಡ್ರೆ ಅವರ ಭಾವಪೂರ್ಣ ಶ್ರದ್ಧಾಂಜಲಿ ಸಭೆ ಆಯೋಜಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀ ಗುರುನಾಥ ಜ್ಯಾಂತೀಕರ್ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡಾ. ಭೀಮಣ್ಣ ಖಂಡ್ರೆ ಅವರು ನೇರ ನುಡಿ, ಗಂಭೀರ ನಡೆ, ಸ್ವಾಭಿಮಾನ ಮತ್ತು ಅಪಾರ ದೇಶಭಕ್ತಿಯ ಪ್ರತೀಕವಾಗಿದ್ದರು ಎಂದು ಸ್ಮರಿಸಿದರು. ಸ್ವಾತಂತ್ರö್ಯ ಹೋರಾಟಗಾರರಾಗಿದ್ದ ಅವರು ಧರ್ಮಾಭಿಮಾನಿಗಳಾಗಿಯೂ ಸಮಾಜ ಸೇವೆಯಲ್ಲಿ ಅಪಾರ ಕೊಡುಗೆ ನೀಡಿದರು. ವೀರಶೈವ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾಗಿ ಸಮಾಜ ಸಂಘಟನೆಗೆ ಅವಿರತ ಶ್ರಮವಹಿಸಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ವೀರಶೈವ ಸಮಾಜದ ಭವನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.
ಬೀದರ್ ಜಿಲ್ಲೆ ಮಹಾರಾಷ್ಟ್ರದ ಪಾಲಾಗುವ ಸಂದರ್ಭದಲ್ಲೂ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಅವರು ವಹಿಸಿದ ಪಾತ್ರ ಸ್ಮರಣೀಯವಾಗಿದೆ. ಸಹಕಾರ ಕ್ಷೇತ್ರದಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದು, ಹಲವು ವರ್ಷಗಳ ಕಾಲ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದರು. ಭಾಲ್ಕಿ ತಾಲೂಕಿನಲ್ಲಿ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿ, ಜಿಲ್ಲೆಯ ಜನತೆಗೆ ಸ್ವಾಭಿಮಾನದ ಜೀವನಕ್ಕೆ ದಾರಿ ಮಾಡಿಕೊಟ್ಟರು ಎಂದು ಹೇಳಿದರು.
ಲೋಕನಾಯಕರ ಅಗಲಿಕೆಯಿಂದ ಬೀದರ್ ಜಿಲ್ಲೆಗೆ ಹಾಗೂ ವೀರಶೈವ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿ, ಅವರ ಕುಟುಂಬದವರಿಗೆ ಹಾಗೂ ಲಕ್ಷಾಂತರ ಅಭಿಮಾನಿಗಳಿಗೆ ದುಃಖ ತಾಳುವ ಶಕ್ತಿ ನೀಡಲೆಂದು ಮತ್ತು ಲಿಂಗೈಕ್ಯರಾದ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಲಾಯಿತು. ಅವರ ಬದುಕು ಇಂದಿನ ಯುವ ಸಮುದಾಯಕ್ಕೆ ದಾರಿದೀಪವಾಗಲಿ ಎಂದು ಆಶಿಸಿದರು.
ಸಭೆಯಲ್ಲಿ ಬೀದರ್ ಜಿಲ್ಲಾ ಒಕ್ಕೂಟದ ನಿರ್ದೇಶಕರಾದ ಶ್ರೀ ಸಂಜೀವ್ ಕುಮಾರ್ ಪಾಟಿಲ್, ಶ್ರೀ ಜಗನ್ನಾಥ ಕರಂಜೆ, ಶ್ರೀ ರಾಜಶೇಖರ್ ನಾಗಮೂರ್ತಿ, ಶ್ರೀ ಕ್ರಾಂತಿಕುಮಾರ್ ಕುಲಾಲ್, ಶ್ರೀ ಸಂಜಯ್ ಕ್ಯಾಸ, ಶ್ರೀ ಚೆನ್ನಮಲ್ಲಿಕಾರ್ಜುನ, ಶ್ರೀ ಶಿವಶಂಕರ್ ಬೆಳಮಗಿ, ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಶ್ರೀ ರಾಜೇಶ್ ಕೆ.ಎಂ., ಕಲ್ಯಾಣ ಸೌಹಾರ್ದದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ಶಿವರಾಜ್ ಹೂಗಾರ್, ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಅಮೃತ್ ಹೊಸಮನಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.























