ಮಹಿಳೆಯರ ಪ್ರಗತಿಗೆ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನವೇ ಕಾರಣ :ಡಾ. ಸವಿತಾ ತಿವಾರಿ

ಕಲಬುರಗಿ :ಜ.3: ಶತಮಾನಗಳಿಂದ ನಾಲ್ಕು ಗೋಡೆಗಳ ಮಧ್ಯೆ ಶೋಷಣೆ ಬದುಕು ಕಾಣುತ್ತಿದ್ದ ಹೆಣ್ಣು ಮಕ್ಕಳಿಗೆ ಡಾ. ಬಿ. ಆರ್. ಅಂಬೇಡ್ಕರ್ ಸಂವಿಧಾನದ ಮೂಲಕ ಶಿಕ್ಷಣ, ಸ್ವಾತಂತ್ರ್ಯ, ಸಮಾನತೆ ಮತ್ತು ಅವಕಾಶಗಳಿಂದ ಮಹಿಳೆಯರು ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ಸರ್ಕಾರಿ ಸ್ವಾಯತ್ತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ಹೇಳಿದರು.
ಕುಸನೂರು ರಸ್ತೆಯ ಜಿಡಿಎ ಲೇಔಟಿನಲ್ಲಿರುವ ಜನರಂಗದಲ್ಲಿ ಶುಕ್ರವಾರ ಆಯೋಜಿಸಿದ ದಿ. ಶಿವಕಾಮಿ ಪ್ರಭುದೇವ ಶಂಖಿನಮಠ ಇವರ ಐದನೇ ಪುಣ್ಯಸ್ಮರಣೆ ಅಂಗವಾಗಿ ನಡೆಸಿದ ‘ಸಂವಿಧಾನದ ಆಧಾರದ ಮೇಲೆ ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ’ ಪ್ರಬಂಧ ಸ್ಪರ್ಧೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿ. ಶಿವಕಾಮಿ ಪ್ರಭುದೇವ ಶಂಖಿನಮಠ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪ ಸಮರ್ಪಿಸಿ ಉದ್ಘಾಟಿಸಿ ಮಾತನಾಡಿ ಮೊಬೈಲ್ ಬಳಕೆ ಮಾನವೀಯ ಸಂಬಂಧಗಳನ್ನು ಕಸಿಯುತ್ತಿವೆ. ಬಂಧುತ್ವದ ಸಂಬಂಧಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ರಕ್ತ ಸಂಬಂಧ ಬಹಳ ಮುಖ್ಯ. ರಂಗಕರ್ಮಿ ಶಂಕ್ರಯ್ಯ ಆರ್. ಘಂಟಿಯವರೊಬ್ಬ ಭಾವ ಜೀವಿ. ಸಂವೇದನಾಶೀಲ ವ್ಯಕ್ತಿತ್ವದ ಜೊತೆಗೆ ಬದುಕುವ ಇವರು ಮಹಿಳೆಯರ ಬಗೆ ಇವರಿಗಿರುವ ಗೌರವಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ ಎಂದರು.
ಸರ್ಕಾರಿ ಸ್ವಾಯತ್ತ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಶ್ರೀಮಂತ ಹೋಳ್ಕರ್ ಮಾತನಾಡಿ ಮನೆಯಲ್ಲಿ ಕಟ್ಟಿ ಹಾಕಿದ ಮಹಿಳೆಯರ ಅಗಾದ ಶಕ್ತಿ ಮತ್ತು ಸಾಮಥ್ರ್ಯವನ್ನು ಗುರುತಿಸಿ ಮುಖ್ಯವಾಹಿನಿಗೆ ಬರಲು ಸಂವಿಧಾನ ಪ್ರೇರಣೆಯಾಗಿದೆ. ಶೋಷಣೆಗೆ ಒಳಗಾಗಿದ್ದ ಹೆಣ್ಣು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಡಾ. ಬಿ. ಆರ್. ಅಂಬೇಡ್ಕರ್ ಅವರ ದೂರದೃಷ್ಠಿ ಚಿಂತನೆಯಿಂದ ಮಹಿಳೆಯರಿಗೆ ಕಾನೂನಾತ್ಮಕ ಹಕ್ಕುಗಳನ್ನು ನೀಡಿದ್ದಾರೆ. ಭೂಮಿಯಿಂದ ಚಂದ್ರನವರೆಗೂ ಮಹಿಳೆಯರು ಸಾಧನೆಗೈದಿದ್ದಾರೆ. ಇಂದಿನ ರಾಷ್ಟ್ರಪತಿಯಿಂದ ಹಿಡಿದು ಕಲ್ಪನ ಚಾವ್ಲಾ, ಸುನೀತ ವಾಲಿಯಮ್ಸ್ ಸಾಕ್ಷಿಯಾಗಿದ್ದಾರೆ. ಶಿಕ್ಷಣ, ಕ್ರೀಡೆ, ಕಲೆ, ಸಾಹಿತ್ಯ, ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹಿಳೆಯರೇ ಮುಂದಿದ್ದಾರೆ ಎಂದ ಅವರು ವಿಜ್ಞಾನ ಮುಂದುವರಿದಿದೆ. ಮಂಗಳ ಮತ್ತು ಚಂದ್ರನ ಅಂಗಳದಲ್ಲಿ ವಾಸಿಸುವ ಯೋಜನೆಯಿದೆ. ಆದರೆ, ಜಾತಿ ಜಾತಿ, ವರ್ಗ ವರ್ಗ ಗಳ ನಡುವೆ ಸಂಘರ್ಷವಿದೆ. ಮಹಿಳಾ ಶೋಷಣೆ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಸರಿಯಲ್ಲ ಎಂದರು.
ಸರ್ಕಾರಿ ಸ್ವಾಯತ್ತ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಸಾಂಸಕೃತಿಕ ಸಂಚಾಲಕ ಡಾ. ಬಲಭೀಮ ಸಾಂಗ್ಲಿ ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆ ಹೊರಹೊಮ್ಮಲು ಜನರಂಗ ಸಂಸ್ಥೆ ನಮ್ಮ ವಿದ್ಯಾರ್ಥಿಗಳಿಗೆ ಅವಕಾಶ ನೀಡಿರುವುದು ಸ್ತುತ್ಯರ್ಹ. ವಿದ್ಯಾರ್ಥಿಗಳು ಓದಿನ ಜೊತೆಗೆ ಪಠ್ಯೇತರ ಕ್ರೀಡೆ, ಸಿನಿಮಾ, ಕಲೆ ಮತ್ತು ಸಂಗೀತ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡರೆ ಜೀವನ ಸುಗಮ ಎಂದರು.
ಫರಾಹತಾಬಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಇಂದುಮತಿ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರ ಪಾಲಿಗೆ ಡಾ. ಬಿ.ಆರ್. ಅಂಬೇಡ್ಕರ್ ನಿಜಕ್ಕೂ ದೇವತಾ ಮನುಷ್ಯ. ಮನು ಸಂವಿಧಾನದಿಂದ ಮಹಿಳೆಯರಿಗೆ ನ್ಯಾಯ ಮತ್ತು ಸಮಾನತೆ ಎಂಬುದು ಇರಲಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹಿಳೆಯರಿಗೆ ಶಿಕ್ಷಣ, ಸಮಾನ ಅವಕಾಶ ಮತ್ತು ಕಾನೂನು ತಂದು ಮಹಿಳೆಯರ ಸಬಲೀಕರಣ ಸಾಧ್ಯವಾಗಿದೆ. ಬುದ್ಧ, ಬಸವಣ್ಣ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರ ನಾಡಿನಲ್ಲಿ ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಮರ್ಯಾದೆ ಗೇಡು ಹತ್ಯೆಗಳು ನಿರಂತರ ನಡೆದಿವೆ. ಮಹಿಳೆಯರು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. ಮನದಲ್ಲಿ ಮನು ಸಂವಿಧಾನದ ಮನಸ್ಥಿತಿ ನಿವಾರಣೆಯಾಗದೆ ಸಮಾಜ ಸುಧಾರಣೆ ಸಾಧ್ಯವಿಲ್ಲ ಎಂದ ಅವರು ಸತ್ತಂತಿಹರನು ಬಡಿದೆಬ್ಬಿಸಿ ಎಂಬಂತೆ ಶಂಕ್ರಯ್ಯ ಘಂಟಿಯವರ ಜನರಂಗ ಜನಮುಖಿಯಾಗಿ ಮುನ್ನಡೆಯಲಿ ಎಂದು ಆಶಿಸಿದರು.
ಜನರಂಗ ಅಧ್ಯಕ್ಷ ಶಂಕ್ರಯ್ಯ ಆರ್. ಘಂಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಜನರಂಗ ಹದಿನೈದು ವಸಂತಗಳನ್ನು ಪೂರೈಸಿದೆ. ಸಹೋದರಿ ಶಿವಕಾಮಿ ಬಡವರ ಬಗ್ಗೆ ಕಾಳಜಿ, ಅಸಕ್ತರಿಗೆ ಧನ ಸಹಾಯ, ಹೆಣ್ಣು ಮಕ್ಕಳ ಬಗ್ಗೆ ಅಪಾರ ಪ್ರೀತಿಯಿತ್ತು. ನೊಂದ ಜೀವಗಳಿಗೆ ನೆರವಿಗೆ ಸ್ಪಂದಿಸುವ ಗುಣವಿತ್ತು. ಅವರ ಹೆಸರಿನಲ್ಲಿ ಪ್ರತಿ ವರ್ಷ ಸ್ಮರಣಾರ್ಥ ಮಕ್ಕಳಿಗೆ ಏರ್ಪಡಿಸಿದ ಸಂವಿಧಾನ ಆಧಾರದ ಮೇಲೆ ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಸರ್ಕಾರಿ ಸ್ವಾಯತ್ತ ಪದವಿ ಮಹಾವಿದ್ಯಾಲಯದ ಅಂರ್ಥಶಾಸ್ತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿ ಶ್ವೇತಾ ಕೆ (ಮೊದಲ ಬಹುಮಾನ- ರೂ 2000/-) ಅಥೀಫ್ ಪಟೇಲ್ ಇಬ್ರಾಹಿಂ (ದ್ವಿತೀಯ ಬಹುಮಾನ-1500/-) ಕನ್ನಡ ವಿಭಾಗದ ಬೀಮಾಶಂಕರ್ ಹಿಲ್ಲೀ (ತೃತೀಯ ಬಹುಮಾನ ರೂ 1000/-) ಗಳಿಸಿದ್ದಾರೆ. ಜೊತೆಗೆ, ಕಾದಂಬರಿ ಆಧಾರಿತ ಮಕ್ಕಳ ಸಿನಿಮಾ ‘ನಮ್‍ಸಾಲಿ’ ದಲ್ಲಿ ಬಾಲನಟರಾಗಿ ನಟಿಸಿದ ಶ್ರೀಶೈಲ ಬಾನೇಕರ್, ವಿನಯ ಬಾನೇಕರ್ ಜೀವನ ಸಿಂದಬಂದಗೆ ಅವರಿಗೆ ಪಶಸ್ತಿ ಪತ್ರ ಹಾಗೂ ಪುಸಕ್ತಕ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಾಕ್ ಫನ್ ಬಳಗದ ಎಂ.ಬಿ. ಸಜ್ಜನ್, ರುದ್ರಾಕ್ಷಿ, ಎಸ್, ಮಲ್ಲಿಕಾರ್ಜುನ, ಬಸವಪ್ರಭು, ಈರಣ್ಣ ಜಮಾದಾರ, ಕಲಾವಿದ ಬಾಬುರಾವ್ ಹೆಚ್, ಪತ್ರಿಕೋದ್ಯಮ ವಿಭಾಗದ ಡಾ. ಕೆ. ಎಂ. ಕುಮಾರಸ್ವಾಮಿ ಹಾಗೂ ಸರ್ಕಾರಿ ಸ್ವಾಯತ್ತ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕಿರಣ್ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು.