
ಕಲಬುರಗಿ: ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಶಿವಕುಮಾರ್ ಎಸ್. ಕಿಳ್ಳಿ ಅವರ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ‘ಡಾ. ಬಿ.ಆರ್. ಅಂಬೇಡ್ಕರ್ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಡಾ. ಅಪ್ಪಾರಾವ ದೇವಿ ಮುತ್ಯಾ ಅವರು ಆಶೀರ್ವಚನ ನೀಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸ ಮಾತನಾಡಿ, ಸಮಾಜದಲ್ಲಿ ಸಮಾನತೆ, ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿಗಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.
ರಾಜಕುಮಾರ್ ಎಚ್. ಕಪ್ಪನೂರ್, ವಿನೋದ್ ಆರ್. ಪಾಟೀಲ್, ಶಾಂತಕುಮಾರ್ ಬಿರಾದಾರ್, ಮಾಜಿ ಎಪಿಎಂಸಿ ಅಧ್ಯಕ್ಷ ಅಬ್ಬುಭೈ, ಆನಂದ್ ಪಾಟೀಲ್, ರಾಜಕುಮಾರ್ ಪಾಟೀಲ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಆಡೆ ಹಡಪದ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಹಡಪದ ಸಣ್ಣೂರ, ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಸ್. ಕಿಳ್ಳಿ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಮಾಜ ಸೇವೆ, ಶಿಕ್ಷಣ, ಸಾಹಿತ್ಯ, ಸಂಘಟನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ‘ಡಾ. ಬಿ.ಆರ್. ಅಂಬೇಡ್ಕರ್ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಮಾಜಕ್ಕೆ ತಮ್ಮ ಸೇವೆಯ ಮೂಲಕ ಮಾದರಿಯಾಗಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಇಂತಹ ಕಾರ್ಯಕ್ರಮಗಳು ಯುವಜನರಲ್ಲಿ ಸಾಮಾಜಿಕ ಹೊಣೆಗಾರಿಕೆ ಹಾಗೂ ಸೇವಾ ಮನೋಭಾವ ಬೆಳೆಸಲು ಸಹಕಾರಿಯಾಗಲಿವೆ ಎಂದು ಗಣ್ಯರು ಅಭಿಪ್ರಾಯಪಟ್ಟರು.


























