
ಕಲಬುರಗಿ,ಆ.25: ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ‘ಅರಿವಿನ ದಾಸೋಹ’ ಎನ್ನುವುದು ಜ್ಞಾನವನ್ನು ಹಂಚುವ ಸರಳ ಕಾರ್ಯಕ್ಕಿಂತ ಬಹಳ ವಿಶಾಲವಾದ ಜೀವನದರ್ಶನ ಎಂದು ಶರಣಬಸವ ವಿವಿಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಶೈಲ್ ಮದಾನಿ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಸೋಮವಾರ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ಶರಣಬಸವರ ಅರಿವಿನ ದಾಸೋಹ ಎಂಬ ವಿಷಯ ಕುರಿತು ಮಾತನಾಡಿದರು.
ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ದಾಸೋಹದ ಪರಿಕಲ್ಪನೆಯಲ್ಲಿ ಅನ್ನದಾಸೋಹದ ಜೊತೆಗೆ ಜ್ಞಾನದಾಸೋಹ, ಶಿಕ್ಷಣದಾಸೋಹ ಮತ್ತು ಅರಿವಿನ ದಾಸೋಹಕ್ಕೂ ಅತ್ಯಂತ ಮಹತ್ವವಿತ್ತು.
‘ಅರಿವು’ ಎಂದರೆ ಜ್ಞಾನ, ವಿವೇಕ, ವಿಚಾರಶಕ್ತಿ ಮತ್ತು ಜೀವನದ ಸತ್ಯಗಳನ್ನು ಅರ್ಥಮಾಡಿಕೊಳ್ಳುವ ಸಾಮಥ್ರ್ಯ. ‘ದಾಸೋಹ’ ಎಂದರೆ ತನ್ನಲ್ಲಿರುವ ಸಂಪತ್ತು, ಜ್ಞಾನ, ಶಕ್ತಿ ಮತ್ತು ಸೇವೆಯನ್ನು ಸಮಾಜದ ಒಳಿತಿಗಾಗಿ ಮುಕ್ತವಾಗಿ ಹಂಚಿಕೊಳ್ಳುವುದು. ಹೀಗಾಗಿ ಅರಿವಿನ ದಾಸೋಹ ಎಂದರೆ ತಾನು ಪಡೆದ ಜ್ಞಾನವನ್ನು ತನ್ನಲ್ಲೇ ಇಟ್ಟುಕೊಳ್ಳದೆ, ಅದನ್ನು ಇತರರಿಗೆ ಹಂಚಿ ಅವರ ಬದುಕನ್ನು ಉತ್ತಮಗೊಳಿಸುವುದು.
ಅರಿವಿನ ದಾಸೋಹವೆಂದರೆ ಕೇವಲ ಪುಸ್ತಕದ ಜ್ಞಾನ ನೀಡುವುದಲ್ಲ. ನೈತಿಕತೆ, ಮಾನವೀಯತೆ, ಶಿಸ್ತು, ಪ್ರಾಮಾಣಿಕತೆ, ಸಹಾನುಭೂತಿ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಹೊಣೆಗಾರಿಕೆ ಮುಂತಾದ ಮೌಲ್ಯಗಳನ್ನು ಬೆಳೆಸುವುದೂ ಅದರ ಭಾಗವಾಗಿದೆ.
ಅರಿವಿನ ದಾಸೋಹವು ಪರಂಪರೆಯ ಜ್ಞಾನಕ್ಕೆ ಮಾತ್ರ ಸೀಮಿತವಾಗಿರಬಾರದು ಎಂಬ ದೃಷ್ಟಿಯಿಂದ ಆಧುನಿಕ ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಮತ್ತು ಹೊಸ ಶಿಕ್ಷಣ ಕ್ಷೇತ್ರಗಳಿಗೂ ಒತ್ತು ನೀಡಲಾಯಿತು. ಶರಣಬಸವ ವಿಶ್ವವಿದ್ಯಾಲಯದ ಶೈಕ್ಷಣಿಕ ದರ್ಶನದಲ್ಲಿ ಸಂಶೋಧನೆ, ನವೀನತೆ, ವಿಮರ್ಶಾತ್ಮಕ ಚಿಂತನೆ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಮಹತ್ವ ನೀಡಲಾಗಿದೆ.
ಅಪ್ಪಾಜಿಯವರ ಅರಿವಿನ ದಾಸೋಹದ ಅಂತಿಮ ಗುರಿ ವ್ಯಕ್ತಿಯಷ್ಟೇ ಅಲ್ಲ, ಸಮಾಜದ ಪರಿವರ್ತನೆ. ಶಿಕ್ಷಣ ಪಡೆದ ವ್ಯಕ್ತಿ ತನ್ನ ಕುಟುಂಬ, ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂಬ ಆಶಯ ಇದರಲ್ಲಿ ಅಡಗಿದೆ. ಮಹಿಳಾ ಶಿಕ್ಷಣಕ್ಕೆ ನೀಡಿದ ಪೆÇ್ರೀತ್ಸಾಹವೂ ಅರಿವಿನ ದಾಸೋಹದ ಪ್ರಮುಖ ಭಾಗವಾಗಿದೆ. ಅವರ ಅರಿವಿನ ದಾಸೋಹವು ಮುಂದಿನ ಪೀಳಿಗೆಗಳಿಗೂ ದಾರಿದೀಪವಾಗಿರುವ ಶಾಶ್ವತ ಪರಂಪರೆಯಾಗಿದೆ ಎಂದು ಹೇಳಿದರು.































