Home ಜಿಲ್ಲೆ ಕಲಬುರಗಿ ಭಾವೈಕ್ಯತೆ ಬಿತ್ತಿದ ಮಹಾನ್ ಸಂತ ಡಾ.ಅಪ್ಪ

ಭಾವೈಕ್ಯತೆ ಬಿತ್ತಿದ ಮಹಾನ್ ಸಂತ ಡಾ.ಅಪ್ಪ

ಕಲಬುರಗಿ,ಆ.28:ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾವೈಕ್ಯತೆ ಮತ್ತು ಕೋಮು ಸೌಹಾರ್ದತೆಯನ್ನು ಗಟ್ಟಿಗೊಳಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ಮಹಾನ್ ಸಂತ ಎಂದು ನಿವೃತ್ತ ಪ್ರಾಧ್ಯಾಪಕ ಪೆÇ್ರ.ಕ್ಷೇಮಲಿಂಗ ಬಿರಾದಾರ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಗುರುವಾರ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಭಾವೈಕ್ಯತೆಯ ದಾಸೋಹ ಎಂಬ ವಿಷಯ ಕುರಿತು ಮಾತನಾಡಿದರು.
ಕಲಬುರಗಿಯು ಸೂಫಿ ಮತ್ತು ಶರಣ ಪರಂಪರೆಗಳ ಸಂಗಮದ ನೆಲೆಯಾಗಿದ್ದು, ಶರಣಬಸವೇಶ್ವರ ಸಂಸ್ಥಾನ ಮತ್ತು ಖ್ವಾಜಾ ಬಂದೇ ನವಾಜ್ ಸಂಸ್ಥಾನಗಳ ಸೇವಾ ಪರಂಪರೆಗಳು ಈ ಪ್ರದೇಶದ ಸೌಹಾರ್ದ ವಾತಾವರಣಕ್ಕೆ ಕೊಡುಗೆ ನೀಡಿವೆ. ಪೂಜ್ಯ ಡಾ.ಅಪ್ಪ ಅವರು ಧರ್ಮ, ಜಾತಿ ಮತ್ತು ವರ್ಗಗಳ ಭೇದವಿಲ್ಲದೆ ಎಲ್ಲರನ್ನೂ ಒಂದೇ ಆಗಿ ಕಾಣುವ ಅವರ ವಿಶಾಲ ಮನೋಭಾವ ಈ ಭಾಗದ ಸೌಹಾರ್ದತೆಗೆ ಸಾಕ್ಷಿಯಾಗಿತ್ತು. ಅವರು ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೆ, ಸರ್ವಧರ್ಮ ಸಮನ್ವಯತೆಯನ್ನು ಬಲವಾಗಿ ಪ್ರತಿಪಾದಿಸಿದರು. ಅವರ ದಾಸೋಹ ಸಂಸ್ಥಾನದ ಬಾಗಿಲುಗಳು ಜಾತಿ-ಮತ ಭೇದವಿಲ್ಲದೆ ಎಲ್ಲರಿಗೂ ಸದಾ ತೆರೆದಿರುತ್ತಿದ್ದವು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಅವರು, ಸಮಾಜದ ಹಿಂದುಳಿದ, ಬಡ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗುವಂತೆ ಮಾಡಿದರು. ಜಾತಿಯ ಸಂಕೋಲೆಗಳನ್ನು ಮೀರಿ ಮಹಿಳೆಯರು ಸ್ವಾವಲಂಬಿಗಳಾಗಲು ಮೊದಲ ಮಹಿಳಾ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹದಲ್ಲಿ ಯಾವುದೇ ಜಾತಿ, ಭೇದ ಇರಲಿಲ್ಲ. ಶ್ರೀಮಂತ-ಬಡವ, ಮೇಲ್ಜಾತಿ-ಕೆಳಜಾತಿ ಎಂಬ ಭೇದಭಾವವಿಲ್ಲದೆ ಎಲ್ಲರೂ ಒಂದೇ ಕಡೆ ಕುಳಿತು ಪ್ರಸಾದ ಸ್ವೀಕರಿಸುವ ಮೂಲಕ ಸಾಂಸ್ಕøತಿಕ ಹಾಗೂ ಸಾಮಾಜಿಕ ಭಾವೈಕ್ಯತೆಯನ್ನು ಇವರು ಸಾಕಾರಗೊಳಿಸಿದ್ದರು.
ಪೂಜ್ಯರು ಬರೆದ ‘ಮಹಾದಾಸೋಹ ಸೂತ್ರಗಳು’ ಮತ್ತು ಶರಣರ ತತ್ವಗಳು ಕೇವಲ ಆಧ್ಯಾತ್ಮಿಕ ಬೋಧನೆಗಳಾಗಿರದೆ, ಮಾನವೀಯತೆ ಮತ್ತು ಸಾಮುದಾಯಿಕ ಒಗ್ಗಟ್ಟನ್ನು ಬಲಪಡಿಸುವ ಸೂತ್ರಗಳಾಗಿದ್ದವು. ಅವರ ಇಡೀ ಜೀವನವು “ಕಾಯಕವೇ ಕೈಲಾಸ” ಮತ್ತು “ದಾಸೋಹ” ಪರಿಕಲ್ಪನೆಯಡಿ ಸಮಾಜದ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸುವ ಒಂದು ಮಹತ್ತರವಾದ ಭಾವೈಕ್ಯತೆಯ ಪಯಣವಾಗಿತ್ತು ಎಂದು ಹೇಳಿದರು.