Home ಜಿಲ್ಲೆ ಕಲಬುರಗಿ ಡಾ.ಅಪ್ಪ ಅವರು ನಡೆ-ನುಡಿಯ ಸಾಧಕರು

ಡಾ.ಅಪ್ಪ ಅವರು ನಡೆ-ನುಡಿಯ ಸಾಧಕರು

ಕಲಬುರಗಿ,ಆ.24:ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ನುಡಿದ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾದ ಸಾಧಕರು ಎಂದು ಕಮಲಾಪೂರದ ಸರಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಅಂಬಾರಾಯ ಮಡ್ಡೆ ಹೇಳಿದರು.

ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ರವಿವಾರ
ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ನಡೆ-ನುಡಿ ದಾಸೋಹ ವಿಷಯ ಕುರಿತು ಮಾತನಾಡಿದರು. ಪೂಜ್ಯ ಅಪ್ಪ ಅವರು ನುಡಿದಂತೆ ನಡೆದು ಸಮಾಜ ಉನ್ನತಿಗಾಗಿ ಶ್ರಮಿಸಿದರು.

ನುಡಿ ಎಂದರೆ ವ್ಯಕ್ತಿಯ ಮಾತು, ವಿಚಾರ, ಬೋಧನೆ ಮತ್ತು ಸಂದೇಶ. ನಡೆ ಎಂದರೆ ಆ ಮಾತುಗಳನ್ನು ಜೀವನದಲ್ಲಿ ಅನುಷ್ಠಾನಗೊಳಿಸುವ ರೀತಿ.
“ಮಾತು ಒಂದು, ನಡೆ ಮತ್ತೊಂದು” ಆಗಬಾರದು ಎಂಬುದು ಶರಣ ಪರಂಪರೆಯ ಪ್ರಮುಖ ಸಂದೇಶ. ಈ ದೃಷ್ಟಿಯಿಂದ ನೋಡಿದಾಗ, ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ನಡೆ-ನುಡಿ ದಾಸೋಹವೆಂದರೆ ತಾವು ನಂಬಿದ ಮೌಲ್ಯಗಳನ್ನು ತಮ್ಮ ಬದುಕಿನ ಮೂಲಕ ಸಮಾಜಕ್ಕೆ ನೀಡಿದ ದಾಸೋಹ ಎಂದು ಹೇಳಬಹುದು.

ಪೂಜ್ಯರು ಸಕಲ ಜೀವಿಗಳಲ್ಲಿ ಲೇಸನ್ನೆ ಕಾಣುತ್ತಿದ್ದರು, ಶೈಕ್ಷಣಿಕ ಲೋಕದ ಸಂತರಾದ ಅವರು ನಡೆ ನುಡಿಗಳು ಘನ ತೂಕದ ವ್ಯಕ್ತಿತ್ವದವರು. ತಮ್ಮ ಮಹಾದಾಸೋಹ ಸೂತ್ರಗಳಲ್ಲಿ ನಡೆ ನುಡಿ ಕುರಿತು ಹೇಳಿದವರು. ಎಲ್ಲಾ ಧರ್ಮಗಳ ಆರಾಧಕರಾಗಿದ್ದರು. ಅವರ ನಡೆ ನುಡಿಗಳ ಇನ್ನೊಂದು ಆಯಾಮವೆಂದರೆ ಸಂಘಟನಾ ಚಾತುರ್ಯ. ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಭಾಷೆ ಆದ್ಯತೆ ನೀಡಿ ಕನ್ನಡವನ್ನು ರಕ್ಷಣೆಗೈದವರು.

ಅವರ ನಡೆ-ನುಡಿಯಲ್ಲಿ ಜ್ಞಾನದಾಸೋಹಕ್ಕೆ ವಿಶೇಷ ಸ್ಥಾನ ಇದೆ. ಶಿಕ್ಷಣವು ವ್ಯಕ್ತಿಯ ಬದುಕನ್ನು ಮಾತ್ರವಲ್ಲದೆ ಇಡೀ ಸಮಾಜವನ್ನು ಪರಿವರ್ತಿಸಬಲ್ಲದು ಎಂಬ ನಂಬಿಕೆಯಿಂದ ಶಿಕ್ಷಣ ಕೇಂದ್ರವಾಗಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮೂಲಕ ಶಾಲೆ, ಪದವಿ ಪೂರ್ವ, ಪದವಿ, ತಾಂತ್ರಿಕ ಹಾಗೂ ಉನ್ನತ ಶಿಕ್ಷಣದ ವಿವಿಧ ಅವಕಾಶಗಳು ಬೆಳೆದಿವೆ. ಈ ಶೈಕ್ಷಣಿಕ ಪರಂಪರೆಯನ್ನು ಅವರ ದಾಸೋಹದ ಪ್ರಮುಖ ಆಯಾಮವಾಗಿ ನೋಡಬಹುದು.

ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ನಡೆ-ನುಡಿ ದಾಸೋಹವೆಂದರೆ ಅವರು ನಂಬಿದ ಕಾಯಕ, ದಾಸೋಹ, ಶಿಕ್ಷಣ, ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಕೇವಲ ಉಪದೇಶವಾಗಿ ಉಳಿಸದೆ, ಕಾರ್ಯರೂಪದಲ್ಲಿ ಸಮಾಜಕ್ಕೆ ಅರ್ಪಿಸಿದ ಜೀವನದರ್ಶನ ಎಂದು ಹೇಳಬಹುದು. ಶಿಕ್ಷಣ ಸಂಸ್ಥೆಗಳ ನಿರ್ಮಾಣ, ಜ್ಞಾನದಾಸೋಹ, ಮಹಿಳಾ ಶಿಕ್ಷಣಕ್ಕೆ ಒತ್ತು ಮತ್ತು ಸಾಮಾಜಿಕ ಸೇವೆಯ ಮೂಲಕ ಅವರ ಚಿಂತನೆಗಳು ವಿಶಾಲ ಜನಸಮುದಾಯವನ್ನು ತಲುಪಿವೆ ಎಂದು ಹೇಳಿದರು.