ಡಾ. ಅಂಬೇಡ್ಕರ್ ನಿಗಮದ ಗುತ್ತಿಗೆ ನೌಕರನ ನಿಯೋಜನೆ ಕೈಬಿಡದಿದ್ದರೆ ಉಗ್ರ ಹೋರಾಟ

ಯಾದಗಿರಿ:ಜ.28: ಜಿಲ್ಲೆಯ ಡಾ| ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಾಗರ್ ಸಜ್ಜನ್ ಈತನನ್ನು ನಿಯುಕ್ತಿಗೊಳಿಸಬಾರದೆಂದು ಪ್ರಧಾನ ವ್ಯವಸ್ಥಾಪಕರು ಆದೇಶ ಮಾಡಿದ್ದರೂ ಅವರನ್ನು ಮುಂದುವರೆಸುತ್ತಿರುವುದನ್ನು ಕೈಬಿಟ್ಟು ತಕ್ಷಣ ಅವರನ್ನು ಕೈಬಿಡುವಂತೆ ಆಗ್ರಹಿಸಿ ಅಂಬೇಡ್ಕರ್ ಸೇನೆ ಮನವಿ ಸಲ್ಲಿಸಿದೆ.

ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಯಾದಗಿರಿಯ ಡಾ| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಾಗರ್ ಸಜ್ಜನ್ ಈತನನ್ನು ನಿಗಮಕ್ಕೆ ನಿಯೋಜಿಸಬಾರದೆಂದು ಸೂಚಿಸಿ ಪತ್ರ ಬರೆದಿದ್ದರೂ ಕೂಡಾ ಮುಂದುವರೆಸಿದ್ದು, ಸದರಿಯವರನ್ನು ಒಂದು ವಾರದೊಳಗೆ ಬಿಡುಗಡೆಗೊಳಿಸದೇ ಇದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ಸದ್ರಿ ನೌಕರನ ವಿರುದ್ಧ ಆರ್ಥಿಕ ಅಪರಾಧದ ಆರೋಪಗಳು ಇರುವುದರಿಂದ ಅವರನ್ನು ನಿಗಮದ ಕೆಲಸಕ್ಕೆ ನಿಯುಕ್ತಿ ಮಾಡದಂತೆ ಈಗಾಗಲೇ ಮನವಿ ಸಲ್ಲಿಸಿದ್ದು ಅದರನ್ವಯ ಪ್ರಧಾನ ವ್ಯವಸ್ಥಾಪಕರು ಆದೇಶ ಮಾಡಿರುತ್ತಾರೆ.

ಆದರೆ ಇದುವರೆಗೆ ಅವರನ್ನು ಕೈಬಿಡುವ ಕೆಲಸ ಮಾಡದೇ ಇರುವುದರಿಂದ ಮತ್ತೆ ಮನವಿ ಸಲ್ಲಿಸಿದ್ದು, ಒಂದು ವಾರದೊಳಗೆ ಬಿಡುಗಡೆಗೊಳಿಸದೇ ಇದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಭೀಮಾಶಂಕರ ಯರಗೋಳ ಎಚ್ಚರಿಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಂಜುನಾಥ, ಶಿಲ್ಪಾ, ಶಿವಕುಮಾರ, ಶರಣಪ್ಪ, ಮಹೇಶ ಇದ್ದರು.