ಹುಳಿಯಾರು, ಸೆ. ೧೮- ಜನಸಾಮಾನ್ಯರು ಅಧಿಕಾರಿಗಳು ಹಾಗೂ ಶಾಸಕರನ್ನು ಹುಡುಕಿಕೊಂಡು ಅಲೆದಾಡುವುದನ್ನು ತಪ್ಪಿಸಿ, ಅವರ ಸಮಸ್ಯೆಗಳ ಅಹವಾಲು ಸ್ವೀಕರಿಸಿ ಸಾಧ್ಯವಾದರೆ ಸ್ಥಳದಲ್ಲೇ ಬಗೆಹರಿಸುವ ಸಲುವಾಗಿ ಮನೆ ಮಗ ಮನೆ ಬಾಗಿಲಿಗೆ ಕಾರ್ಯಕ್ರಮ ಮಾಡುತ್ತಿದ್ದೇನೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಹಂದನಕೆರೆ ಹೋಬಳಿಯ ಬೆಳಗುಲಿ ಗ್ರಾಮ ಪಂಚಾಯ್ತಿಯಲ್ಲಿ ೧೫ನೇ ವಾರದ ಮನೆ ಬಾಗಿಲಿಗೆ ಮನೆ ಮಗ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಇಲಾಖಾವಾರು ಜನರಿಗೆ ತಿಳಿಸಿ ಅವುಗಳ ಪ್ರಯೋಜನವನ್ನು ಜನರಿಗೆ ತಿಳಿಸಲು ಆಯಾ ಇಲಾಖೆಯ ಅಧಿಕಾರಿಗಳೊಂದಿಗೆ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇವೆ. ನಿಮ್ಮ ಗ್ರಾಮದ ಸಮಸ್ಯೆಯಾಗಲಿ, ವೈಯಕ್ತಿಕ ಸಮಸ್ಯೆಗಳಾಗಲಿ ಮುಕ್ತವಾಗಿ ಚರ್ಚಿಸಿ ಬಗೆ ಹರಿಸಿಕೊಳ್ಳಿ ಎಂದರು.
ನಾವಾಗಲಿ ಇಲಾಖೆಯ ಅಧಿಕಾರಿಗಳಾಗಲಿ ಸೇವೆ ಎಂಬ ಭಾವನೆಯಿಂದ ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಕ್ಷೇತ್ರದ ಜನರಿಗಾಗಿ ವಾರಕೊಮ್ಮೆ ಜನಸ್ಪಂದನ ಕಾರ್ಯಕ್ರಮವನ್ನು ಕಳೆದ ೭೯ ವಾರಗಳಿಂದ ಪಟ್ಟಣದ ತಿ.ನಂ.ಶ್ರೀ ಭವನದಲ್ಲಿ ಮಾಡುಲಾಗುತ್ತಿದೆ. ಇದರಿಂದ ತಾಲ್ಲೂಕಿನಲ್ಲಿ ಯಾವುದೇ ಮಾಸಿಕ ವೇತನಗಳ ಅರ್ಜಿ ಬರುತ್ತಿಲ್ಲ. ಇದರೊಂದಿಗೆ ಬುಕ್ಕಾಪಟ್ಟಣ ಹೋಬಳಿಯ ಜನರಿಗೆ ಸಿರಾದಲ್ಲಿ ಸಭೆ ಮಾಡುತ್ತಿದ್ದೇವೆ. ಇದೆಲ್ಲ ಜನರಿಗಾಗಿ ಮಾಡಿದ್ದೇವೆ ಎಂದ ಅವರು, ನಮ್ಮ ಕ್ಷೇತ್ರದಲ್ಲಿ ಒಟ್ಟು ೩೪ ಗ್ರಾಮ ಪಂಚಾಯಿತಿಗಳಿದ್ದು ಅವುಗಳಲ್ಲಿ ಪ್ರತಿ ಶುಕ್ರವಾರ ಒಂದೊಂದು ಗ್ರಾಮ ಪಂಚಾಯ್ತಿಯಲ್ಲಿ ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಕಳೆದ ವಾರದಿಂದ ಇನ್ನೊಂದು ನೂತನ ಕಾರ್ಯಕ್ರಮ ಆಯೋಜಿಸಿದ್ದು ಬಗರ್ ಹುಕ್ಕುಂ ಸಾಗುವಳಿದಾರರ ಜಮೀನುಗಳಿಗೆ ಭೇಟಿ ನೀಡಿ ಸ್ಥಳದಲ್ಲೇ ಪಾರದರ್ಶಕವಾಗಿ ಅರ್ಹ ಸಾಗುವಳಿದಾರರಿಗೆ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಜನರು ಇಂತಹ ಕಾರ್ಯಕ್ರಮ ಸದ್ಭಳಕೆ ಮಾಡಿಕೊಳ್ಳಿ ಎಂದರು.
ತಹಶೀಲ್ದಾರ್ ಪುರಂದರ ಕೆ. ಮಾತನಾಡಿ, ಸಾರ್ವಜನಿಕರು ಇಲಾಖೆಗಳಿಗೆ ಭೇಟಿ ನೀಡಿದಾಗ ಅಧಿಕಾರಿಗಳು ಯಾವುದೊ ಕಾರಣಕ್ಕೆ ನಿಮಗೆ ಸಿಗದೇ ಇರಬಹುದು ಆದ್ದರಿಂದ ನಿಮ್ಮ ಗ್ರಾಮಕ್ಕೆ ಎಲ್ಲಾ ಅಧಿಕಾರಿಗಳು ಬಂದಿದ್ದು ಅವರಿಂದ ನಿಮ್ಮ ಕೆಲಸ ಮಾಡಿಸಿಕೊಳ್ಳಿ. ಈ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಜನರ ಸಂಪರ್ಕ ಕೊಂಡಿಯಂತೆ ಇದೆ. ಇದರೊಂದಿಗೆ ಇಲಾಖೆಗಳಿಂದ ಸಿಗುವ ಪ್ರಯೋಜನ ಹಾಗೂ ಲಾಬಾಂಶ ಪಡೆಯಲು. ಭ್ರಷ್ಟತೆಯಿಂದ ಮುಕ್ತವಾಗಿ ಈ ಕಾರ್ಯಕ್ರಮ ಬಳಕೆಯಾಗಲಿ ಎಂದರು.
ಬೆಳಗುಲಿ ಗ್ರಾ.ಪಂ. ಅಧ್ಯಕ್ಷ ಬಸವರಾಜ್ ಎಸ್. ಮಾತನಾಡಿ, ಕಳೆದ ಎರಡು ವರ್ಷದ ಹಿಂದೆ ಜಲ್ ಜೀವನ್ ಯೋಜನೆ ಅನುಷ್ಟಾನವಾಗಿದೆ. ಆದರೆ ಇತ್ತೀಚೆಗೆ ಅನೇಕ ಹೊಸ ಮನೆಗಳು ಆಗಿದ್ದು ಅವುಗಳಿಗೆ ಈ ಯೋಜನೆ ವಿಸ್ತರಿಸಬೇಕು. ಪ್ರತಿ ಗ್ರಾಮಗಳಿಗೆ ಸಿ.ಸಿ ರಸ್ತೆ ಹಾಕಿಸಬೇಕು ಎಂದರು.
ಪವತಿ ಖಾತೆ. ಗೋಮಾಳ ಮಂಜೂರಾತಿಗಾಗಿ. ಮಂಜೂರಾತಿ ಜಮೀನು ಖಾತೆಗಾಗಿ. ಪಡಿತರ ಚೀಟಿಗಾಗಿ. ನಿವೇಶನಕ್ಕಾಗಿ. ಮನೆಗಳಿಗೆ ಅರ್ಜಿಗಳು ಸಾರ್ವಜನಿಕರಿಂದ ಸ್ವೀಕರಿಸಿದರು.
ಬೆಳಗುಲಿ ಗ್ರಾ.ಪಂ.ಯ ತಾರೀಕಟ್ಟೆ. ಗೂಬೆಹಳ್ಳಿ. ನಿರುವಗಲ್. ಪಾಪನಕೋಣ. ಬೆಳಗುಲಿ ಗ್ರಾಮಗಳಲ್ಲಿ ಸಭೆ ಗಳನ್ನು ಮಾಡಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ಶಾಂತಕುಮಾರ್, ಇಒ ದೊಡ್ಡಸಿದ್ಧಯ್ಯ. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವರಾಜ್‌ಕುಮಾರ್, ಪಶು ಇಲಾಖೆಯ ವೈದ್ಯಾಧಿಕಾರಿ ಕಾಂತರಾಜು, ಸಿಡಿಪಿಒ ಹೊನ್ನಪ್ಪ, ಸಮಾಜ ಕಲ್ಯಾಣಧಿಕಾರಿ ಶ್ರೀಧರ್, ಗ್ರಾ.ಪಂ.ಸದಸ್ಯರುಗಳಾದ ಲಕ್ಕಮ್ಮ, ರಾಮಯ್ಯ, ಜಯಲಕ್ಷ್ಮಮ್ಮ, ಅಂಜನಪ್ಪಸೇರಿದಂತೆ ತಾಲ್ಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

































