ಚಿಕ್ಕನಾಯಕನಹಳ್ಳಿ, ಆ. ೨- ಎಲ್ಲದಕ್ಕೂ ಕೆಟ್ಟ ಮೂಲಗಳನ್ನು ಹುಡುಕಬಾರದು. ಒಳ್ಳೆಯದನ್ನು ಪರಿಗಣಿಸಿ ಒಳ್ಳೆಯ ಅವಕಾಶಗಳು ಸಿಕ್ಕಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪಿಎಸ್‌ಐ ದ್ರಾಕ್ಷಾಯಣಮ್ಮ ಹೇಳಿದರು.
ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ವತಿಯಿಂದ ಅಪೋಲೋ ಫೌಂಡೇಷನ್ ಸಹಯೋಗದೊಂದಿಗೆ ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ಸಂಸ್ಥೆಯ ಜನ ಹಿತಕ್ಕಾಗಿಯೇ ಅನೇಕ ಸೇವೆ ಸಲ್ಲಿಸುತ್ತಿದೆ. ಸಮಾಜದಲ್ಲಿ ಪ್ರತಿಯೊಬ್ಬರು ಏನಾದರು ಒಂದು ಮಾಡಿಯೇ ಇರುತ್ತಾರೆ. ಎಲ್ಲ ವಿಷಯಕ್ಕೂ ಕೆಟ್ಟ ಮೂಲಗಳನ್ನು ಹುಡುಕಬಾರದು. ಕೆಟ್ಟದನ್ನು ಬಿಟ್ಟು ಒಳ್ಳೆಯದಕ್ಕೆ ಒತ್ತು ನೀಡಿ. ಜನರಿಗೆ ಅವಶ್ಯಕತೆ ಇರುವ ಅನುಕೂಲತೆಗಳನ್ನು ಪ್ರತಿಯೊಬ್ಬರು ಪ್ರಯೋಜನೆ ಪಡೆದುಕೊಳ್ಳಬೇಕು ಎಂದರು.
ಜನಸಾಮಾನ್ಯರು ಮೊದಲು ಕಾನಾನೂನುಗಳ ಅರಿವು ಮೂಡಿಸಿಕೊಳ್ಳಬೇಕು. ಬಾಲ್ಯ ವಿವಾಹ ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದೆ. ಪೋಕ್ಸೋ ಕಾಯ್ದೆಯನ್ನು ಅರಿತು ಪ್ರೀತಿ ಪ್ರೇಮ ವಿಚಾರದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳು ಜಾಗೃತಿಯಾಗಿರಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವುದರಿಂದ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದರು.
ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ಸಂಸ್ಥೆಯ ಸಿಒಒ ಪಂಚಾಕ್ಷರಿ ಮಾತನಾಡಿ, ಕಣ್ಣಿನ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕಾದ ಅನಿವಾರ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಪರಿಣಮಿಸುತ್ತಿದೆ. ಆರಂಭದಲ್ಲೇ ತಪಾಸಣೆ ಮಾಡಿಸಿ, ಸಮಸ್ಯೆ ಕಂಡರೆ ಚಿಕಿತ್ಸೆ ಪಡೆಯಬೇಕು. ಕಣ್ಣು ಮಾನವನ ಅತೀ ಸೂಕ್ಷ್ಮವಾದ ಅಂಗ. ಇದನ್ನು ಅತಿ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ನಮ್ಮ ಸೇವಾ ಸಂಸ್ಥೆಯು ಸತತ ೨೭ ವರ್ಷಗಳಿಂದ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ೮ ಲಕ್ಷ ಕುಟುಂಬಗಳಿಗೆ ಸಾಮಾಜಿಕವಾಗಿ ಸ್ಪಂದಿಸಿದ್ದೇವೆ. ಉಚಿತ ನೇತ್ರ ತಪಾಸಣ ಶಿಬಿರ ಮಾಡಿ ಸಾವಿರಾರು ಮಂದಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗಿದೆ. ಸರ್ಕಾರಿ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಗ್ರಾಮೀಣ ನೈರ್ಮಲ್ಯ, ಶಿಕ್ಷಣ ಹಾಗೂ ನೆರೆಯಿಂದ ತತ್ತರಿಸಿದ್ದ ಕೊಡಗು ಜಿಲ್ಲೆಯ ಅನೇಕ ಗ್ರಾಮದ ಸಂತ್ರಸ್ತರಿಗೆ ಪುಡ್‌ಕಿಟ್ ವಿತರಣೆ ಮತ್ತು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು, ಕಲಿಕಾ ಸಲಕರಣೆಗಳನ್ನು ಉಚಿತವಾಗಿ ನೀಡಲಾಗಿದೆ. ಕಣ್ಣಿನ ತಪಾಸಣೆ ನಡೆಸಿ ಅಗತ್ಯವಿದ್ದರಿಗೆ ಉಚಿತವಾಗಿ ಕನ್ನಡಕ ವಿತರಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮುದ್ದೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ಗಂಗಾಧರ್ ಮಾತನಾಡಿ, ಕಣ್ಣನ್ನು ಜೋಪಾನವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು. ಪ್ರತಿಯೊಬ್ಬರು ಆರೋಗ್ಯವಂತರಾದರೆ ಸಮಾಜ ಅಭಿವೃದ್ದಿ ಹೊಂದಲು ಸಾಧ್ಯ. ಆರೋಗ್ಯ ರಕ್ಷಣೆಯ ಜತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಗ್ರಾಮೀಣ ಭಾಗದ ಮಹಿಳೆಯರಿಗೆ, ಬಡ ಜನರಿಗೆ ಉಚಿತ ತಪಾಸಣೆ ಶಿಬಿರಗಳು ಅನುಕೂಲವಾಗಿದೆ. ಗ್ರಾಮಸ್ಥರು, ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಶಿಬಿರದಲ್ಲಿ ೧೩೫ ಜನರು ಉಚಿತ ನೇತ್ರ ಪರೀಕ್ಷೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಬಿಎಸ್‌ಎಸ್ ಸಂಸ್ಥೆಯ ಸಿಇಓ ಕುಮಾರ್, ಮುಖ್ಯ ಸಹಾಯಕ ಪಂಡಿತ್ ಗಂಗಾಧರ್, ಉಪ ಸಹಾಯಕ ಪ್ರಶಾಂತ್, ಅಪೊಲೋ ಫೌಂಡೇಷನ್ ಸುಶಾಂತ್ ಉಪಾಧ್ಯಯ, ಪಿಡಿಓ ಶಿವಕುಮಾರ್, ಗ್ರಾ.ಪಂ ಸದಸ್ಯ ಮಲ್ಲೇಶ್, ಚಂದ್ರಶೇಖರಯ್ಯ, ಫಾಮೀದಾ, ಮಾಜಿ ಅಧ್ಯಕ್ಷ ಈಶ್ವರ್ ಮತ್ತಿತರರು ಉಪಸ್ಥಿತರಿದ್ದರು


































