ಉಗ್ರ ಚಟುವಟಿಕೆಯಲ್ಲಿ ವೈದ್ಯರು ಭಾಗಿ: ಖಂಡನೆ

ಬೀದರ್:ನ.12: ಉಗ್ರ ಚಟುವಟಿಕೆಗಳಲ್ಲಿ ವೈದ್ಯರು ಭಾಗಿಯಾಗಿರುವುದನ್ನು ಖ್ಯಾತ ಚರ್ಮರೋಗ ತಜ್ಞರೂ ಆದ ಆರೋಗ್ಯ ಭಾರತಿ ಅಧ್ಯಕ್ಷ ಡಾ. ಅಶೋಕಕುಮಾರ ನಾಗೂರೆ ತೀವ್ರವಾಗಿ ಖಂಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಜಾಲ ಭೇದಿಸಿ, ಬಂಧಿಸಿರುವ ಎಂಟು ಮಂದಿಯಲ್ಲಿ ಮೂವರು ವೈದ್ಯರಿರುವುದು ಆಘಾತಕಾರಿಯಾಗಿದೆ ಎಂದು ಹೇಳಿದ್ದಾರೆ.
ವೈದ್ಯ ವೃತ್ತಿ ಶ್ರೇಷ್ಠವಾದದ್ದು. ಹೀಗಾಗಿ ವೈದ್ಯರನ್ನು ದೇವರಿಗೆ ಹೋಲಿಸಲಾಗಿದೆ. ಆದರೆ, ವೈದ್ಯರು ಜೀವ ಉಳಿಸುವ ಪವಿತ್ರ ವೃತ್ತಿಯನ್ನು ಆಯ್ಕೆ ಮಾಡಿಕೊಂಡು, ಅಮಾಯಕರ ಜೀವ ತೆಗೆಯುವಂತಹ ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದು ಸಮಾಜವನ್ನು ಬೆಚ್ಚಿ ಬೀಳಿಸಿದೆ ಎಂದು ತಿಳಿಸಿದ್ದಾರೆ.
ದೇಶದ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ದೇಶ ವಿರೋಧಿ ಹಾಗೂ ಉಗ್ರ ಚಟುವಟಿಕೆಯಲ್ಲಿ ತೊಡಗಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.