Home ಜಿಲ್ಲೆ ಕಲಬುರಗಿ ಅನ್ಯ ಉದ್ದೇಶಕ್ಕೆ ಕೃಷಿ ವಿಜ್ಞಾನ ಕೇಂದ್ರದ ಜಮೀನು ಬಳಕೆ ಬೇಡ

ಅನ್ಯ ಉದ್ದೇಶಕ್ಕೆ ಕೃಷಿ ವಿಜ್ಞಾನ ಕೇಂದ್ರದ ಜಮೀನು ಬಳಕೆ ಬೇಡ

ಕಲಬುರಗಿ,ಅ.10-ನಗರದ ಆಳಂದ ಚೆಕ್‍ಪೋಸ್ಟ್ ಹತ್ತಿರದ ಕೃಷಿ ಸಂಶೋಧನಾ ಕೇಂದ್ರದ ಜಮೀನಿನಲ್ಲಿರುವ ಜಾಗವನ್ನು ಅನ್ಯ ಕಾರ್ಯಗಳ ಉದ್ದೇಶಕ್ಕೆ ಬಳಕೆ ಮಾಡಲು ಅವಕಾಶ ನೀಡದಂತೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಾ.ಸಿದ್ರಾಮಪ್ಪ ಪಾಟೀಲ ಧಂಗಾಪುರ ಆಗ್ರಹಿಸಿದ್ದಾರೆ.
ಈ ಸಂಬಂಧ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಅವರು, ಡಾ.ಮಲ್ಲಿಕಾರ್ಜುನ ಖರ್ಗೆ ಅವರು 1974ರಲ್ಲಿ ರಾಜ್ಯದ ಸಚಿವರಾಗಿದ್ದ ಸಂದರ್ಭದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾಗಿದ್ದರು. ಈ ಸಂದರ್ಭದಲ್ಲಿ ಅವರು ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಕಾರಣಿಕರ್ತರಾಗಿದ್ದರು. ಕೃಷಿ ವಿಜ್ಞಾನ ಕೇಂದ್ರಕ್ಕೆ ಆಳಂದ ಚೆಕ್‍ಪೋಸ್ಟ್ ಬಳಿ 134 ಎಕರೆ ಜಮೀನು ಕೊಡಿಸಲಾಗಿದೆ. ಈ ಕೇಂದ್ರದಲ್ಲಿ ತೊಗರಿ ಮತ್ತು ಕಡಲೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಕೇಂದ್ರ ಸರ್ಕಾರದ ದ್ವಿದಳ ಧಾನ್ಯ ಆತ್ಮ ನಿರ್ಬರ ಮಿಷನ್ ಯೋಜನೆ ಅಡಿ ಸಂಶೋಧನೆ ಮತ್ತು ಬೀಜೋತ್ಪಾದನೆ ಕಾರ್ಯಕ್ರಮ ಚಾಲ್ತಿಯಲ್ಲಿದ್ದು, ದೇಶದ ಅತ್ಯುತ್ತಮ ಸಂಶೋಧನೆ ಕೇಂದ್ರಗಳಲ್ಲಿ ಕಲಬುರಗಿ ಕೃಷಿ ಸಂಶೋಧನಾ ಕೇಂದ್ರವು ಒಂದೆಂದು ಗುರುತಿಸಿಕೊಂಡಿದೆ. 134 ಎಕರೆ ಜಮೀನಿನ 50 ಎಕರೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ, 25 ಎಕರೆಯಲ್ಲಿ ಕೃಷಿ ಮಹಾವಿದ್ಯಾಲಯ, 55 ಎಕರೆಯಲ್ಲಿ ಕೃಷಿ ಸಂಶೋಧನಾ ಕೇಂದ್ರ, 4 ಎಕರೆಯಲ್ಲಿ ಕಟ್ಟಡ ಮತ್ತು ಉಗ್ರಾಣ ಕೆಲಸ ನಿರ್ವಹಿಸುತ್ತಿದೆ. ಕೃಷಿ ಸಂಶೋಧನೆಗಾಗಿ ಮೀಸಲಿಟ್ಟಿರುವ ಈ ಜಮೀನಿನಲ್ಲಿ ಜಿಲ್ಲಾಡಳಿತ 12 ಎಕರೆ ಜಮೀನನ್ನು ಅಜೀಂ ಪ್ರೇಮ್ ಜಿ ಫೌಂಡೇಶನ್‍ನಿಂದ 500 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ನಿರಾಪೇಕ್ಷಣಾ ಪತ್ರ ನೀಡುವಂತೆ ಪ್ರಸ್ತಾಪಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದರಿರುವುದಾಗಿ ತಿಳಿದುಬಂದಿದೆ. ಅಜಿಮ್ ಪ್ರೇಮ್ ಜಿ ಫೌಂಡೇಶನ್ ಅವರ ಉದ್ದೇಶ ಉತ್ತಮವಾದದ್ದು, ಆದರೆ, ಜಿಲ್ಲಾಡಳಿತ ಮತ್ತು ಸರ್ಕಾರ ಕೃಷಿ ವಿಜ್ಞಾನ ಕೇಂದ್ರದ ಬದಲಿಗೆ ಬೇರೆ ಸರ್ಕಾರಿ ಜಾಗದಲ್ಲಿ ಆಸ್ಪತ್ರೆನಿರ್ಮಿಸಲು ಸ್ಥಳಾವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.