
ಬೆಂಗಳೂರು, ನ. ೫- ಸಂಪುಟ ಪುನರ್‌ರಚನೆ ಅಧಿಕಾರ ಹಂಚಿಕೆ ನವೆಂಬರ್ ಕ್ರಾಂತಿ ನಡೆಯಲಿದೆ ಎಂಬ ಚರ್ಚೆಗಳ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ದೆಹಲಿ ಪ್ರವಾಸ ಕೈಗೊಂಡಿರುವುದು ನಾನಾ ವ್ಯಾಖ್ಯಾನಗಳಿಗೆ ಎಡೆಮಾಡಿಕೊಟ್ಟಿದೆ.
ಮುಖ್ಯಮಂತ್ರಿ ಬದಲಾವಣೆ ಕುರಿತು ಕಾಂಗ್ರೆಸ್ ಪಾಳಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ವಿದ್ಯಮಾನಗಳ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ದೆಹಲಿ ಭೇಟಿ ಕೈಗೊಂಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಮಧ್ಯಾಹ್ನ ೩ ಗಂಟೆ ದೆಹಲಿಗೆ ತೆರಳಲಿರುವ ಡಿ.ಕೆ. ಶಿವಕುಮಾರ್ ನೀರಾವರಿ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲರೊಂದಿಗೆ ಚರ್ಚೆ ನಡೆಸುವ ಸಲುವಾಗಿ ಈ ಭೇಟಿ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಇಂದು ದೆಹಲಿಯ ಕರ್ನಾಟಕ ಭವನದಲ್ಲೇ ವಾಸ್ತವ್ಯ ಹೂಡಲಿದ್ದು, ನಾಳೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಚರ್ಚೆಗಳು ನಡೆದಿರುವಾಗಲೆ ಡಿ.ಕೆ. ಶಿವಕುಮಾರ್‌ರವರ ದೆಹಲಿ ಭೇಟಿ ಮಹತ್ವ ಪಡೆದುಕೊಂಡಿದೆ. ಸಂಪುಟ ಪುನರ್‌ರಚನೆ ಸಂಬಂಧ ಈ ತಿಂಗಳ ೧೪ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾಯಕಿ ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭೇಟಿ ಮಾಡುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ.
ಸಂಪುಟ ಪುನರ್‌ರಚನೆ, ಅಧಿಕಾರ ಹಂಚಿಕೆ ಕುರಿತಂತೆ ಕಾಂಗ್ರೆಸ್ ಮುಖಂಡರು ಭಿನ್ನ ವಿಭಿನ್ನ ಹೇಳಿಕೆ ನೀಡುತ್ತಿದ್ದು, ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ೫ ವರ್ಷಗಳ ಕಾಲ ಸಿದ್ದರಾಮಯ್ಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂಬ ಹೇಳಿಕೆಗಳು ಗೊಂದಲ ಸೃಷ್ಟಿಸಿವೆ.
ಈ ಬೆಳೆವಣಿಗೆ ನಡುವೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ. ಪರಮೇಶ್ವರ್ ದೆಹಲಿಗೆ ಯಾರು ಹೋಗುತ್ತಾರೆ ಗೊತ್ತಿಲ್ಲ. ತಾವಂತೂ ಸದ್ಯಕ್ಕೆ ದೆಹಲಿಗೆ ತೆರಳುತ್ತಿಲ್ಲ. ಅವಶ್ಯಕತೆ ಬಿದ್ದರೆ ದೆಹಲಿಗೆ ತೆರಳುವುದಾಗಿ ಹೇಳಿದರು. ಸಂಪುಟದಿಂದ ಹಿರಿಯ ಸಚಿವರನ್ನು ಕೈ ಬಿಡುವ ವಿಚಾರ ಹೈಕಮಾಂಡ್ ತೀರ್ಮಾನಿಸಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನ. ೧೪ ರಂದು ಸಿದ್ದರಾಮಯ್ಯ ಪ್ರವಾಸ ನಿಗದಿಯಾಗಿದ್ದು, ನ. ೧೧ಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಯಲ್ಲೇ ಠಿಕಾಣಿ ಹೂಡಲಿದ್ದಾರೆ ಎಂದು ಹೇಳಲಾಗಿದೆ. ಈ ಬೆಳೆವಣಿಗೆಗಳ ಮಧ್ಯೆ ಸಚಿವ ಸತೀಶ್ ಜಾರಕಿ ಹೊಳಿ ದೆಹಲಿ ಪ್ರವಾಸ ಹಠಾತ್ ರದ್ದಾಗಿದೆ.
ಈ ತಿಂಗಳಲ್ಲೇ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂuಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆ ಸಂಪುಟ ಪುನರ್‌ರಚನೆ ಕುರಿತಂತೆ ನಡೆಯಲಿರುವ ಬೆಳೆವಣಿಗೆಗಳು ಬಿಹಾರ ಚುನಾವಣೆಯ ನಂತರ ಮತ್ತಷ್ಟು ಚುರುಕುಗೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ.
ಮ್ಯೂಜಿಕಲ್ ಚೇರ್ ಆಟ

ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿರುವ ಬಗ್ಗೆ ಬಿಜೆಪಿ ಮ್ಯೂಜಿಕಲ್ ಹಾಕಿ ಅದಕ್ಕೊಂದು ಹಾಡಿನ ಮೂಲಕ ಸರ್ಕಾರ ಕಾಲೆಳೆದಿದೆ. ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ್, ಸಚಿವ ಸತೀಶ್ ಜಾರಕಿ ಹೊಳಿಗೆ ನವೆಂಬರ್ ಕ್ರಾಂತಿಗೆ ಕ್ಷಣಗಣನೆ ಎಂದು ಬರೆದು ವ್ಯಂಗ್ಯ ಮಾಡಿದೆ.
































