
ಬೆಂಗಳೂರು, ನ. ೨೬- ರಾಜ್ಯ ಕಾಂಗ್ರೆಸ್‌ನ ಅಧಿಕಾರ ಹಂಚಿಕೆಯ ಬಗ್ಗೆ ಹೈಕಮಾಂಡ್ ತೀರ್ಮಾನ ಹೊರ ಬೀಳುವ ಮುನ್ನವೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರುಗಳ ಜತೆ ಸಭೆ ನಡೆಸುತ್ತಿದ್ದು, ನಿನ್ನೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಜತೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
ಮುಖ್ಯಮಂತ್ರಿ ಆಪ್ತ ವಲಯದಲ್ಲಿ ಸಚಿವ ಸತೀಶ್ ಜಾರಕಿಹೊಳಿಯವರ ಜತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿನ್ನೆ ತಡರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು, ಅಧಿಕಾರ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನವೊಲಿಸಿ ಎಂದು ಮನವಿ ಮಾಡಿದರು ಎನ್ನಲಾಗಿದೆ.
ಈ ಹಿಂದೆ ಹೈಕಮಾಂಡ್ ಸಮ್ಮುಖದಲ್ಲಿ ಆಗಿರುವ ಮಾತುಕತೆಯಂತೆ ಸಿದ್ದರಾಮಯ್ಯನವರು ಅಧಿಕಾರ ಬಿಟ್ಟು ಕೊಡಲಿ. ಅವರ ಮಾರ್ಗದರ್ಶನದಲ್ಲಿ ಸರ್ಕಾರ ನಡೆಸುತ್ತೇನೆ, ನನಗೂ ಮುಖ್ಯಮಂತ್ರಿಯಾಗಲು ಸಹಕಾರ ಕೊಡಿ ಎಂದು ಸತೀಶ್ ಜಾರಕಿಹೊಳಿರವರಲ್ಲಿ ಕೋರಿದರು ಎನ್ನಲಾಗಿದೆ.
ಅಧಿಕಾರ ಹಂಚಿಕೆಯಾಗಿ ನಾನು ಮುಖ್ಯಮಂತ್ರಿಯಾದರೆ ನಿಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿದೆ. ಉಪಮುಖ್ಯಮಂತ್ರಿ ಪಟ್ಟವೂ ದೊರಕುವಂತೆ ಪ್ರಯತ್ನ ನಡೆಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನವೊಲಿಸಿ ಅಧಿಕಾರ ಹಂಚಿಕೆಯನ್ನು ಸುಸೂತ್ರಗೊಳಿಸಿ ಎಂದು ಸತೀಶ್ ರವರಿಗೆ ಡಿಕೆಶಿ ತಿಳಿಸಿದರು ಎನ್ನಲಾಗಿದೆ.
ನಾವೆಲ್ಲಾ ಒಟ್ಟಾಗಿ, ಒಗ್ಗಟ್ಟಾಗಿ ಕೆಲಸ ಮಾಡೋಣ. ೨೦೨೮ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ. ಹಾಗಾಗಿ ಅಧಿಕಾರ ಹಂಚಿಕೆಯ ಗೊಂದಲವನ್ನು ಪರಿಹರಿಸಿ, ಸಿದ್ದರಾಮಯ್ಯನವರಿಗೆ ಎಲ್ಲವನ್ನು ಮನಮುಟ್ಟುವಂತೆ ಹೇಳಿ ಎಂದು ಸತೀಶ್ ರವರಿಗೆ ಡಿ.ಕೆ. ಶಿವಕುಮಾರ್ ಹೇಳಿದರು ಎಂದು ಹೇಳಲಾಗಿದೆ.
ಸಚಿವ ಸತೀಶ್ ಜಾರಕಿಹೊಳಿಯವರ ಭೇಟಿಗೂ ಮುನ್ನ ನಿನ್ನೆ ರಾತ್ರಿ ಸಚಿವ ಜಮೀರ್ ಅಹಮದ್ ರವರ ಜತೆಯೂ ಡಿ.ಕೆ. ಶಿವಕುಮಾರ್ ರವರು ಚರ್ಚೆ ನಡೆಸಿದ್ದರು. ಇದಕ್ಕೂ ಮೊದಲು ಪ್ರಿಯಾಂಕ ಖರ್ಗೆಯವರ ಜತೆಯೂ ಚರ್ಚೆ ನಡೆಸಿದ್ದರು.
ಅಧಿಕಾರ ಹಂಚಿಕೆಯ ಬಗ್ಗೆ ಹೈಕಮಾಂಡ್ ತೀರ್ಮಾನ ಪ್ರಕಟವಾಗುವ ಮೊದಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಪ್ತ ಬಣದ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದು, ಇದರ ಭಾಗವಾಗಿ ಒಬ್ಬೊಬ್ಬರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಿದ್ದಾರೆ.
ಸ್ವಲ್ಪ ಕಾಯಿರಿ: ಡಿಕೆಶಿಗೆ ರಾಹುಲ್ ಸಂದೇಶ
ಅಧಿಕಾರ ಹಂಚಿಕೆಯ ಜಟಾಪಟಿ ಕಾಂಗ್ರೆಸ್‌ನಲ್ಲಿ ಜೋರಾಗಿರುವಾಗಲೇ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಸ್ವಲ್ಪ ಕಾಯಿರಿ, ನಾನು ನಿಮ್ಮನ್ನು ಸಂಪರ್ಕಿಸುತ್ತೇನೆ (Pಟeಚಿse Wಚಿiಣ I Wiಟಟ ಅಚಿಟಟ ಙou ಃಚಿಛಿಞ) ಎಂಬ ಸಂದೇಶ ಕಳುಹಿಸಿದ್ದಾರೆ.
ಅಧಿಕಾರ ಹಂಚಿಕೆಯ ಗೊಂದಲಗಳನ್ನು ಪರಿಹರಿಸಿ ಅಧಿಕಾರ ಹಂಚಿಕೆಯ ಸೂತ್ರವನ್ನು ಅಂತಿಮಗೊಳಿಸುವ ಸಂಬಂಧ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಯತ್ನ ನಡೆಸಿದ್ದು, ಇಂದು ಅವರ ಸಮಯಕ್ಕಾಗಿ ಡಿ.ಕೆ. ಶಿವಕುಮಾರ್ ದೂರವಾಣಿ ಮೂಲಕ ರಾಹುಲ್‌ಗಾಂಧಿಯವರನ್ನು ಸಂಪರ್ಕಿಸಿದ್ದಾರೆ. ಆಗ ರಾಹುಲ್‌ಗಾಂಧಿಯವರ ದೂರವಾಣಿಯಿಂದ ಸ್ವಲ್ಪ ಕಾಯಿರಿ, ನಾನೇ ನಿಮ್ಮನ್ನು ಸಂಪರ್ಕಿಸುತ್ತೇನೆ ಎಂಬ ಸಂದೇಶ ಬಂದಿದೆ ಎಂದು ಉಪಮುಖ್ಯಮಂತ್ರಿಗಳ ಆಪ್ತ ಮೂಲಗಳು ಹೇಳಿವೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಜಟಾಪಟಿ ತಾರಕ್ಕೇರಿರುವ ಸಂದರ್ಭದಲ್ಲಿ ಕೆಲ ದಿನಗಳ ಹಿಂದೆ ದೆಹಲಿಗೆ ಹೋಗಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ರಾಹುಲ್‌ಗಾಂಧಿಯವರನ್ನು ಭೇಟಿಯಾಗಲು ಪ್ರಯತ್ನ ನಡೆಸಿದ್ದರಾದರೂ ಅದು ಸಾಧ್ಯವಾಗಿರಲಿಲ್ಲ. ಇದಾದ ಬಳಿಕ ಸತತವಾಗಿ ರಾಹುಲ್‌ಗಾಂಧಿಯವರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದ್ದ ಡಿಕೆಶಿಯವರಿಗೆ ಈಗ ರಾಹುಲ್‌ಗಾಂಧಿಯವರು ಸ್ವಲ್ಪ ಕಾಯಿರಿ, ನಾನೇ ಸಂಪರ್ಕಿಸುತ್ತೇನೆ ಎಂಬ ಸಂದೇಶ ರವಾನಿಸಿದ್ದಾರೆ.
ನಾಳೆ ಇಲ್ಲವೇ ನಾಡಿದ್ದು ಖರ್ಗೆ-ರಾಹುಲ್ ಭೇಟಿ
ಅಧಿಕಾರ ಹಂಚಿಕೆಯ ಸಂಬಂಧ ರಾಜ್ಯ ಕಾಂಗ್ರೆಸ್‌ನ ಎಲ್ಲಾ ನಾಯಕರುಗಳ ಜತೆ ಸಮಾಲೋಚಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನಿನ್ನೆ ದೆಹಲಿಗೆ ತೆರಳಿದ್ದು, ನಾಳೆ ಇಲ್ಲವೇ ನಾಡಿದ್ದು ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಿ ರಾಜ್ಯ ಕಾಂಗ್ರೆಸ್ ವಿದ್ಯಮಾನಗಳ ಬಗ್ಗೆ ವರದಿ ನೀಡುವರು.
ನಾಳೆ ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ, ಇವರುಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ ನಂತರ ನಾಳೆ ಇಲ್ಲವೇ ನಾಡಿದ್ದು ರಾಹುಲ್‌ಗಾಂಧಿಯವರನ್ನು ಭೇಟಿ ಮಾಡುವರು.
ರಾಜ್ಯ ಕಾಂಗ್ರೆಸ್‌ನ ಅಧಿಕಾರ ಹಂಚಿಕೆಯ ಕಗ್ಗಂಟ್ಟನ್ನು ಬಿಡಿಸುವ ಜವಾಬ್ದಾರಿ ರಾಹುಲ್‌ಗಾಂಧಿಯವರ ಹೆಗಲೇರಿದ್ದು, ಅವರು ಎಲ್ಲ ಜತೆ ಸಮಾಲೋಚಿಸಿ ಈ ವಾರದೊಳಗೆ ಒಂದು ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.




























