
ಬೆಂಗಳೂರು, ಮೇ೩೧- ಇಂದಿನಿಂದ ಬಿಎಂಟಿಸಿಯ ವಿಶೇಷ ಟೂರ್ ಪ್ಯಾಕೇಜ್ ದಿವ್ಯ ದರ್ಶನ ಆರಂಭವಾಗಿದ್ದು, ಮೊದಲ ದಿನವೇ ನಿರೀಕ್ಷೆಗಿಂತ ಹೆಚ್ಚು ಭಕ್ತರು ಬೆಂಗಳೂರಿನ ಪ್ರಸಿದ್ಧ ದೇವಾಲಯಗಳ ದರ್ಶನ ಪಡೆಯುತ್ತಿದ್ದಾರೆ.
ಶನಿವಾರ ಬೆಳಗ್ಗೆ ೮.೩೦ಕ್ಕೆ ಮೆಜೆಸ್ಟಿಕ್‌ನಿಂದ ಬಸ್ ಹೊರಟಿದ್ದು, ಈ ವಿಶೇಷ ಪ್ಯಾಕೇಜ್‌ಗೆ ಮೊದಲ ದಿನವೇ ಬಿಎಂಟಿಸಿಯ ೩ ಎಸಿ ಬಸ್‌ಗಳಲ್ಲಿ ೨೦೦ಕ್ಕೂ ಹೆಚ್ಚು ಜನ ಬೆಂಗಳೂರಿನ ಪ್ರಸಿದ್ಧ ದೇವಾಲಯಗಳ ದರ್ಶನ ಪಡೆಯುತ್ತಿದ್ದಾರೆ.
ಪ್ರಮುಖವಾಗಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ, ರಾಜರಾಜೇಶ್ವರಿ ದೇವಸ್ಥಾನ, ಶೃಂಗಗಿರಿ ಷಣ್ಮುಖ ದೇವಸ್ಥಾನ, ಕುರುಮಾರಿ ಅಮ್ಮ ದೇವಾಲಯ, ಓಂಕಾರ ಹೀಲ್ಸ್, ಇಸ್ಕಾನ್ ವೈಕುಂಠ ದೇವಾಲಯ, ಆರ್ಟ್ ಆಫ್ ಲಿವಿಂಗ್, ಬನಶಂಕರಿ ದೇವಾಲಯದ ವೀಕ್ಷಣೆ ಮಾಡಬಹುದಾಗಿದೆ.
ಬಸ್‌ಗಳ ಸಿಬ್ಬಂದಿ, ಪ್ರಯಾಣಿಕರಿಗೆ ನಗರದ ೮ ದೇವಾಲಯಗಳಲ್ಲಿ ನೇರ ದರ್ಶನ ಮಾಡಿಸಲಿದ್ದಾರೆ.ಪ್ರತೀ ವಾರಾಂತ್ಯದಲ್ಲಿ ಹಾಗೂ ರಜಾ ದಿನಗಳಲ್ಲಿ ಬಿಎಂಟಿಸಿಯಿಂದ ಟೆಂಪಲ್ ಟೂರ್ ನಡೆಯಲಿದ್ದು, ವಯಸ್ಕರಿಗೆ ೪೫೦ ರೂ., ಮಕ್ಕಳಿಗೆ ೩೫೦ ರೂ. ಟಿಕೆಟ್ ದರವನ್ನು ನಿಗದಿ ಮಾಡಲಾಗಿದೆ.
ಭಾನುವಾರ ಟೂರ್ ಪ್ಯಾಕೇಜ್‌ನ ಸೀಟ್‌ಗಳು ಸಹ ಬಹುತೇಕ ಬುಕ್ ಆಗಿವೆ. ಶನಿವಾರ ಬಿಎಂಟಿಸಿಯ ದಿವ್ಯದರ್ಶನ ಬಸ್‌ನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಟೂರ್ ಪ್ಯಾಕೇಜ್ ಬಗ್ಗೆ ಸಂತಸ ವ್ಯಕ್ತಪಡಿಸಿದರು.