ಸಮಾಜದಲ್ಲಿ ಶಾಂತಿ,ಸೌಹಾರ್ದತೆಗೆ ದೈವಪ್ರೇರಣೆ ಅಗತ್ಯ

ಕೋಲಾರ,ಡಿ,೩೦- ಸಮಾಜದಲ್ಲಿ ಪರಸ್ಪರ ಸೌಹಾರ್ದತೆ, ಶಾಂತಿ ನೆಲಸಲು ದೇವರ ಪೂಜೆ,ಸಂಪ್ರದಾಯಗಳ ಆಚರಣೆ ಹೆಚ್ಚು ಪರಿಣಾಮಕಾರಿ, ದೇವರ ಅನುಗ್ರಹವಿದ್ದರೆ ಮಾತ್ರ ಬದುಕು ಹಸನಾಗುತ್ತದೆ ಎಂದು ತಾಲ್ಲೂಕಿನ ಚಿಟ್ನಹಳ್ಳಿಯ ತೊಟ್ಲಿ ಗೇಟ್‌ನಲ್ಲಿರುವ ಅವಧೂತ ದತ್ತಾತ್ರೇಯ, ಶಿರಡಿ ಸಾಯಿಬಾಬಾ ಮಂದಿರದ ಧರ್ಮಾಧಿಕಾರಿ ಸಿಂಹ ವೆಂಕಟೇಶ್ ಅಭಿಪ್ರಾಯಪಟ್ಟರು.


ಮಠದಲ್ಲಿ ಭಾನುವಾರ ವೇಮಗಲ್‌ನ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್, ಸುಗಟೂರು ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಅಷ್ಟಲಕ್ಷ್ಮೀಪೂಜೆ,ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಲೋಕ ಕಲ್ಯಾಣಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಅಲ್ಲಿನ ಧರ್ಮಾಧಿಕಾರಿಗಳಾದ ವೀರೇಂದ್ರಹೆಗ್ಗಡೆಯವರು ಕೈಗೊಂಡಿರುವ ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಹರಡಿರುವ ಜಾತಿಯತೆ, ಮತಾಂಧತೆಯ ವಿಷವನ್ನು ಹೊರ ಹಾಕಿ ಸೌಹಾರ್ದತೆ ನೆಲಸಲು ಸಹಕಾರಿಯಾಗಿವೆ ಎಂದರು.


ಸಾಮೂಹಿಕ ಲಕ್ಷ್ಮೀ ಪೂಜೆಯಲ್ಲಿ ೪೦೦ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದು, ಇಷ್ಟೊಂದು ಮಂದಿ ಯಾವುದೇ ಬೇಧವಿಲ್ಲದೇ ಲಕ್ಷ್ಮೀದೇವಿಯ ಮೊರೆ ಹೋಗಿದ್ದು, ಎಲ್ಲರಿಗೂ ಆ ತಾಯಿ ಒಳ್ಳೆಯದು ಮಾಡಲಿ ಎಂದರು.
ಸುಗಟೂರು ಗ್ರಾಪಂ ಅಧ್ಯಕ್ಷ ಭೂಪತಿಗೌಡ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಗ್ರಾಮಗಳಲ್ಲಿ ದೇವಾಲಯ,ಶಾಲೆಗಳ ಅಭಿವೃದ್ದಿ ಜತೆಗೆ ಮಹಿಳೆಯರ ಸ್ವಾವಲಂಬನೆಗೂ ನೆರವಾಗಿದ್ದಾರೆ, ಅವರ ದೂರದೃಷ್ಟಿ ಶ್ಲಾಘನೀಯ ಎಂದ ಅವರು, ರೈತರು ಮತ್ತು ಅಂತರ್ಜಲದ ಜೀವಾಳವಾದ ಕೆರೆಗಳನ್ನು ಪುನಶ್ಚೇತನಗೊಳಿಸುವುದು, ಶುದ್ದ ಕುಡಿಯುವ ನೀರು ಒದಗಿಸುವುದು, ಅನಾಥರಿಗೆ ಮಾಸಿಕ ವೇತನದ ಮೂಲಕ ನೆರವಾಗುವ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತೊಟ್ಲಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ್, ಗ್ರಾಮೀಣ ಭಾಗದಲ್ಲಿ ಜನರ ಸೇವೆಯನ್ನು ನಿಸ್ವಾರ್ಥವಾಗಿ ಮಾಡುತ್ತಿರುವ ಧರ್ಮಸ್ಥಳ ಸಂಸ್ಥೆ ಕಾರ್ಯ ಮೆಚ್ಚುವಂತದ್ದು, ಗ್ರಾಮಗಳಲ್ಲಿ ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲೂ ಕೈಜೋಡಿಸಿದ್ದಾರೆ ಎಂದು ಧನ್ಯವಾದ ಸಲ್ಲಿಸಿದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಯೋಜನಾಧಿಕಾರಿ ಗಿರೀಶ್ ಮಾತನಾಡಿ, ಯೋಜನೆಯಡಿ ದೇವಾಲಯಗಳ ಜೀರ್ಣೋದ್ಧಾರಕ್ಕೂ ಆದ್ಯತೆ ನೀಡಲಾಗಿದೆ, ಜಿಲ್ಲೆಯ ಕೆರೆಗಳ ಪುನಶ್ಚೇತನ, ಶಾಲೆಗಳಿಗೆ ಶಿಕ್ಷಕರನ್ನು ಒದಗಿಸುವುದು ಮತ್ತಿತರ ಜನಪರ ಕಾರ್ಯಗಳನ್ನು ಸಂಸ್ಥೆ ಮಾಡಿಕೊಂಡು ಬಂದಿದ್ದು, ಮಹಿಳೆಯರ ಆರ್ಥಿಕ ಬಲವರ್ಧನೆಗೂ ನೆರವಾಗಿದೆ ಎಂದರು.


ಪೂಜೆಯನ್ನು ಆಗಮಿಕರಾದ ಕೊರಟಿ ಮಹೋಹರ್ ನಡೆಸಿಕೊಟ್ಟಿದ್ದು, ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಸದಸ್ಯ ನಾಗನಾಳ ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ್, ಚಂದ್ರಣ್ಣ, ಲಕ್ಷ್ಮಣ್, ಪ್ರಕಾಶ್, ವೆಂಕಟಾಚಲಪತಿ, ಅಮರಾವತಮ್ಮ, ಯೋಜನೆಯ ಮೇಲ್ವಿಚಾರಕ ಲೋಕೇಶ್, ಚಿಟ್ನಹಳ್ಳಿ ಒಕ್ಕೂಟದ ಅಧ್ಯಕ್ಷ ಸಿ.ಬಿ.ಆನಂದ್, ಸೇವಾ ಪ್ರತಿನಿಧಿಗಳಾದ ನಾಗಮಣಿ,ಶಿಲ್ಪ, ವೆಂಕಟರತ್ನಮ್ಮ, ಪವಿತ್ರ, ಕಲ್ಪನಾ,ನಾಗರಾಜ್, ಮಂಜುಳಾ ಮತ್ತಿತರರು ಉಪಸ್ಥಿತರಿದ್ದು, ೪೦೦ಕ್ಕೂ ಹೆಚ್ಚು ಮಂದಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.