
ಮಧುಗಿರಿ, ಡಿ. ೧೦- ಮನುಷ್ಯ ಅಜ್ಞಾನ ಮತ್ತು ಅಂಧಕಾರವನ್ನು ಹೋಗಲಾಡಿಸಿ ದೈವಿಕ ಭಾವನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಎಲೆರಾಂಪುರದ ಕುಂಚಟಿಗ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ನೀರಕಲ್ಲು ಗ್ರಾಮದಲ್ಲಿ ಶ್ರೀ ಅಮ್ಮಾಜಿ ಕಾವಲ್ಲೇಶ್ವರಿ ಮತ್ತು ಏಳು ಮಂಜಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೀಪ ಹಚ್ಚುವುದು ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೊಯ್ಯುವುದು ಎಂದು ಅರ್ಥ. ಪ್ರತಿಯೊಬ್ಬರು ಸಮರ್ಪಣ ಭಾವನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಭಾರತ ನೆಲದ ಸಂಸ್ಕೃತಿಯಲ್ಲಿ ಪವಿತ್ರತೆ ಹೊಂದಿದ ಆಚಾರ ವಿಚಾರಗಳಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಧರ್ಮದ ಹಾದಿಯಲ್ಲಿ ನಡೆಯಬೇಕು. ಧಾರ್ಮಿಕ ಕಾರ್ಯಗಳಿಂದ ಮಾತ್ರ ಮನುಷ್ಯನಿಗೆ ಶಾಂತಿ ನೆಮ್ಮದಿ ದೊರಕುತ್ತದೆ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಪ್ರತಿಯೊಬ್ಬರೂ ಸ್ವಾರ್ಥ ಬಿಟ್ಟು ಎಲ್ಲರೂ ತಮ್ಮವರೇ ಎಂದು ಅರ್ಥೈಸಿಕೊಂಡು ಬದುಕು ಸಾಗಿಸಬೇಕು. ಅದೇ ರೀತಿ ರಾಗ-ದ್ವೇಷ- ಅಸೂಯೆ ಬಿಟ್ಟು ಸಹ ಬಾಳ್ವೆ ನಡೆಸುವಂತಾಗಬೇಕು. ಪ್ರತಿ ಗ್ರಾಮಗಳಲ್ಲಿ ಶಾಲೆ, ದೇವಸ್ಥಾನಗಳು ಅತ್ಯವಶ್ಯ. ಜಾತ್ರಾ ಮಹೋತ್ಸವಗಳಿಂದ ನಾವೆಲ್ಲರೂ ಒಂದೇ ಎಂಬ ಮನೋಭಾವ ಮೂಡುತ್ತದೆ ಎಂದು ಹೇಳಿದರು.




























