ಮುಂದಿನ ವರ್ಷ ಡಿಸಿಸಿ ಬ್ಯಾಂಕ್ ಸದಸ್ಯರಿಗೆ ಲಾಭಾಂಶ ಹಂಚಿಕೆ : ಗೋನಾಯಕ

ಕಲಬುರಗಿ,ಸೆ.2: ಮುಂದಿನ ವರ್ಷದಿಂದ ಕಲಬುರಗಿಮತ್ತು ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‍ನಡಿ ಸದಸ್ಯತ್ವ ಹೊಂದಿರುವ 357 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸೇರಿ ಎಲ್ಲ ಸದಸ್ಯ ಸಂಘಗಳಿಗೆ ಲಾಭಾಂಶ ನೀಡಲಾಗುವುದು ಎಂದು ಬ್ಯಾಂಕ್‍ನ ಅಧ್ಯಕ್ಷ ಸೋಮಶೇಖರ ಗೋನಾಯಕ ಹೇಳಿದರು.
ನಗರದ ಶಹಾಬಾದ ಕ್ರಾಸ್‍ನ ಎಚ್.ಬಿ. ಕೋಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಬ್ಯಾಂಕ್‍ನ 99ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 12 ಕೋ.ರೂ ಕೂಡಿಟ್ಟ ಹಾನಿ ಹೋಗಲಾಡಿಸಿದರೆ ಲಾಭಾಂಶ ಸರಳವಾಗಿ ಕೊಡಬಹುದಾಗಿದೆ. ಹೀಗಾಗಿ ಮುಂದಿನ ವರ್ಷ ಹೊತ್ತಿಗೆ ಈಗಿನ ಹಾದಿಯಲ್ಲೇ ಮುನ್ನೆಡೆದರೆ ಕೂಡಿಟ್ಟ ಹಾನಿ ಕೊನೆಗಾಣಿಸಬಹುದಾಗಿದೆ. ಒಟ್ಟಾರೆ ಸದಸ್ಯರಿಗೆ ಲಾಭಾಂಶ ನೀಡಿದರೆ ಬ್ಯಾಂಕ್‍ನ ಇತಿಹಾಸದಲ್ಲಿ ಮೊದಲ ಬಾರಿಗೆ ಲಾಭ ಹಂಚಿಕೆ ಮಾಡಿದಂತಾಗುತ್ತದೆ ಎಂದು ಸರ್ವ ಸದಸ್ಯರ ಗಮನಕ್ಕೆ ಗೋನಾಯಕ ತಂದರು.
ಮಧ್ಯಾಮಾವಧಿ ಸಾಲವೂ ನೀಡಿಕೆ: ಕಳೆದ 10 ವರ್ಷಗಳ ಹಿಂದೆ ನೀಡಲಾಗಿ ರೈತರನ್ನು ಆರ್ಥಿಕ ಸಬಲರನ್ನಾಗಿ ಮಾಡಿರುವ ಮಧ್ಯಾಮಾವಧಿ ಸಾಲವನ್ನೂ ಸಹ ಮುಂದಿನ ವರ್ಷದಲ್ಲಿ ನೀಡಲು ಉದ್ದೇಶಿಸಲಾಗಿದೆ. ಮುಂದಿನ ವರ್ಷ ಹೊತ್ತಿಗೆ ಬ್ಯಾಂಕ್ ಕನಿಷ್ಠ 40ರಿಂದ 50 ಕೋ.ರೂ ಲಾಭ ಹೊಂದುವುದರಿಂದ ಮತ್ತೆ ಮಧ್ಯಾಮವಧಿ ಸಾಲ ನೀಡಲು ಶಕ್ತಿ ಬರುತ್ತದೆ. ಹೀಗಾಗಿ ಈಗಾಗಲೇ ಮಧ್ಯಾಮವಧಿ ಸಾಲ ಪಡೆದು ಕಟ್ಟದೇ ಹಾಗೆ ಮುನ್ನೆಡೆದು ಬರುತ್ತಿರುವ ರೈತರು ಹೆಚ್ಚುವರಿ ಬಡ್ಡಿಯಿಂದ ಪಾರಾಗಲು ಈಗಲೇ ಸಾಲ ಮರುಪಾವತಿಸಬೇಕೆಂದರಲ್ಲದೇ ಬ್ಯಾಂಕ್‍ನ ಆರ್ಥಿಕ ಸದೃಢತೆಗೆ ಕೃಷಿಯೇತರ ಸಾಲಕ್ಕೂ ಒತ್ತು ನೀಡಲು ಉದ್ದೇಶಿಸಲಾಗಿದೆ ಎಂದರು.
ಕಳೆದೆರಡು ವರ್ಷಗಳಿಂದ ಸಾಲ ನೀಡಿಕೆ ಹಾಗೂ ವಸೂಲಾತಿಯಲ್ಲಿ ನಿಯಮ ಬದ್ಧತೆ, ಅನಗತ್ಯ ವೆಚ್ಚಕ್ಕೆ ಕಡಿವಾಣದ ಆರ್ಥಿಕ ಶಿಸ್ತು ಮೈಗೂಡಿಸಿಕೊಂಡ ಪರಿಣಾಮ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಲಾಭದತ್ತ ದೃಢ ಹೆಜ್ಜೆ ಹಾಕಲು ಸಾಧ್ಯವಾಗಿದೆ. ತಾವು ಅಧ್ಯಕ್ಷರಾದ ಸಂದರ್ಭದಲ್ಲಿ ಬ್ಯಾಂಕ್‍ನ ಸ್ಥಿತಿ ಉತ್ತಮವಾಗಿರಲಿಲ್ಲ. ಆದರೆ ಸಾಲ ನೀಡಿಕೆಯಲ್ಲಿ ಶಿಸ್ತುಬದ್ಧ, ವಸೂಲಾತಿಯಲ್ಲಿ ಕಠಿಣ ಕ್ರಮ ಹಾಗೂ ಸರ್ಕಾರದ ಸಹಾಯಧನ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ ಹಾಗೂ ಠೇವಣಿ ಪ್ರಮಾಣ ಹೆಚ್ಚಿಸಿರುವುದು ಜತೆಗೆ ಆಡಳಿತದಲ್ಲಿ ಬಿಗು ನಿಲುವು ತಳೆದಿದ್ದರಿಂದ ಪ್ರಸ್ತುತ ಬ್ಯಾಂಕ್ 14 ಕೋ.ರೂ ಲಾಭ ಹೊಂದಿದೆ. 2023ರ ಆರ್ಥಿಕ ವಷಾರ್ಂತ್ಯಕ್ಕೆ ಎನ್‍ಪಿಎ ಶೇ. 8ರಷ್ಟಿತ್ತು. ಅಂದರೆ ಬಾರದ ಸಾಲ ಇಷ್ಟು ಪ್ರಮಾಣ ಇದ್ದಿರುವುದನ್ನು ಶೇ. 3.31ಕ್ಕೆ ತಂದಿರುವುದೇ ಬ್ಯಾಂಕ್‍ನ ಅಭಿವೃದ್ಧಿಗೆ ಹಿಡಿದ ಕನ್ನಡಿ ಎಂದು ವಿವರಣೆ ನೀಡಿದರು.
ಪ್ರಮುಖವಾಗಿ ಸಭೆಯಲ್ಲಿ 2024-25 ಸಾಲಿನ ಖರ್ಚು ವೆಚ್ಚಕ್ಕೆ ಹಾಗೂ 2025-26 ನೇ ಸಾಲಿನ ಆಯವ್ಯಯಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಮೆಚ್ಚುಗೆ ವ್ಯಕ್ತ: ಸಭೆಯಲ್ಲಿ ಮಾತನಾಡಿದ ಬಹುತೇಕ ರೈತರು, ಶಿಸ್ತುಬದ್ದತೆ ಹೊಂದಿದ ಪರಿಣಾಮ ಡಿಸಿಸಿ ಬ್ಯಾಂಕ್‍ನ್ನು ಅಭಿವೃದ್ಧಿ ಹಳಿಗೆ ತರಲಾಗಿದೆ. ಹೀಗಾಗಿ ತಮಗೆ ಅಭಿನಂದನೆ ಎಂದು ಸೋಮಶೇಖರ ಗೋನಾಯಕ ಅವರಿಗೆ ಮೆಚ್ಚುಗೆ ಮಾತುಗಳನ್ನಾಡಿದರು. ಡಿಸಿಸಿ ಬ್ಯಾಂಕ್‍ನ ಎಂಡಿ ಪವನಕುಮಾರ ವಾರ್ಷಿಕ ವರದಿ ಓದಿದರು. ಬ್ಯಾಂಕ್‍ನ ನಿರ್ದೇಶಕರು ಹಾಗೂ ವಿಧಾನ ಪರಿಷತ್ ಸದಸ್ಯರಾಗಿರುವ ತಿಪ್ಪಣ್ಣಪ್ಪ ಕಮಕನೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ಬಸವರಾಜ ಪಾಟೀಲ್ ಸ್ವಾಗತಿಸಿದರು. ಮತ್ತೋರ್ವ ನಿರ್ದೇಶಕ ಬಾಪುಗೌಡ ಪಾಟೀಲ್ ವಂದಿಸಿದರು.
ಬ್ಯಾಂಕ್‍ನ ನಿರ್ದೇಶಕರಾದ ಶಿವಾನಂದ ಮಾನಕರ, ಅಶೋಕ ಸಾವಳೇಶ್ವರ, ಗುರುನಾಥ ರೆಡ್ಡಿ ಹಳಿ ಸಗರ, ಸಿದ್ರಾಮರೆಡ್ಡಿ ಕೌಳೂರ, ನಿಂಗಣ್ಣ ದೊಡ್ಡಮನಿ, ಮಹಾಂತಗೌಡ ಪಾಟೀಲ್, ಕಲ್ಯಾಣರಾವ ಪಾಟೀಲ್ ಮೂಲಗೆ,ಅಜೀತಕುಮಾರ ಪಾಟೀಲ್, ಶಂಕರ ಭೂಪಾಲ ಪಾಟೀಲ್, ಇಬ್ರಾಹಿಂ ಶಿರವಾಳ ಶಹಾಪುರ, ಚಂದ್ರಶೇಖರ ತಳ್ಳಳ್ಳಿ ಸೇರಿದಂತೆ ಮುಂತಾದವರಿದ್ದರು.