ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ

ಕೋಲಾರ,ಜ,೨೨-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಜನವರಿ ೨೬ ರಿಂದ ೨೮ರ ವರೆಗೆ ಜಿಲ್ಲಾ ತೋಟಗಾರಿಕೆ ನರ್ಸರಿ, ಜಿಲ್ಲಾಧಿಕಾರಿಗಳ ಹಳೇ ಕಛೇರಿ ಆವರಣದಲ್ಲಿ ಆಯೋಜಿಸಲಾಗಿದೆ.


ಮರಳಾಕೃತಿಯಲ್ಲಿ ಮೂಡಿ ಬರುವ ಸಾಲು ಮರದ ತಿಮ್ಮಕ್ಕ ಕಲಾಕೃತಿ, ಹೂಗಳಿಂದ ಅಲಂಕರಿಸಿದ ಹಸು-ಕರು ಹಾಗೂ ರೈತ ಮಹಿಳೆ ಕಲಾಕೃತಿ, ಹಣ್ಣು ತರಕಾರಿಗಳಲ್ಲಿ ವಿವಿಧ ಕಲಾಕೃತಿಗಳ ಕೆತ್ತನೆ, ಜಾನೂರ್ ಕಲಾಕೃತಿಗಳ ಪ್ರದರ್ಶನ, ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ತಯಾರಿಸಲಾದ ಸಾವಯವ ಪರಿಕರಗಳ ಪ್ರದರ್ಶನ, ಔಷಧಿ ಹಾಗೂ ಸುಗಂಧ ದ್ರವ್ಯ ಸಸಿಗಳ ಪ್ರಾತ್ಯಕ್ಷತೆ, ರಂಗೋಲಿಯಲ್ಲಿ ಮೂಡಿಬರುವ ಅವಳಿ ಕೋಲಾರ ಜಿಲ್ಲೆಯ ಮಹನಿಯರ ಛಾಯಾ ಚಿತ್ರಗಳು, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಜೀವನ ಗಾಥೆಯನ್ನು ಛಾಯಾ ಚಿತ್ರಗಳ ಮೂಲಕ ಪ್ರದರ್ಶನ, ವಿದೇಶಿ ಹೂಗಳ ಪ್ರದರ್ಶನ, ಎತ್ತಿನ ಗಾಡಿಯಲ್ಲಿ ಹೂ ಮತ್ತು ತರಕಾರಿಗಳ ಜೋಡಣೆ, ವಿವಿಧ ಅಲಂಕಾರಿಕ ಹೂ ಕುಂಡಗಳ ಜೋಡಣೆ, ಪುಷ್ಟ ರಂಗೋಲಿ, ನುರಿತ ತೋಟಗಾರರಿಂದ ಕಸಿ ಕಟ್ಟುವ ವಿಧಾನದ ಪ್ರಾಯೋಗಿಕ ಪ್ರದರ್ಶನ ಹಾಗೂ ವಿವಿಧ ಹಣ್ಣಿನ, ಹೂವಿನ ಹಾಗೂ ಅಲಂಕಾರಿಕ ಗಿಡಗಳು ಮತ್ತು ವಿವಿಧ ಕಸಿ ತರಕಾರಿಗಳನ್ನು ಸಸ್ಯ ಸಂತೆ ಮೂಲಕ ಮಾರಾಟ ಮಾಡುವುದು ಮತ್ತು ವಿವಿಧ ಇಲಾಖೆಗಳ ಮಳಿಗೆಗಳು ಫಲಪುಷ್ಪ ಪ್ರದರ್ಶನ ವಿಶೇಷತೆಗಳಾಗಿರುತ್ತದೆ. ಪ್ರವೇಶ ಉಚಿತವಾಗಿದ್ದು, ಎಲ್ಲಾ ಸಾರ್ವಜನಿಕ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದೆಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.