
ಬೀದರ, ಮೇ ೬: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ ಬೀದರ ಹಾಗೂ ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ೨೦೨೬-೨೭ನೇ ಸಾಲಿನ ಜಿಲ್ಲಾ ಮಟ್ಟದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಇಂದು ಹೌಸಿಂಗ್ ಬೋರ್ಡ್ ಕಾಲೋನಿಯ ಜಿಲ್ಲಾ ಬಾಲ ಭವನದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ರಾಜ್ಯ ಬಾಲ ಭವನ ಸೊಸೈಟಿ ಉಪಾಧ್ಯಕ್ಷರಾದ ಅನಿಲಕುಮಾರ ಜಮಾದರ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎಂ.ಎಸ್. ಶ್ರೀಧರ ಅವರು ಮಕ್ಕಳೊಂದಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನಿಲಕುಮಾರ ಜಮಾದರ್ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿವರ್ಷ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಗ್ರಾಮೀಣ ಭಾಗದ ಮಕ್ಕಳಿಗೆ ವಿಶೇಷವಾಗಿ ಉಪಯುಕ್ತವಾಗುತ್ತಿದೆ ಎಂದು ಹೇಳಿದರು. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಬೆಳೆಸುವ ಉದ್ದೇಶದಿಂದ ಈ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಎ. ಮುನಾಫ್ ಅವರು, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಇಂತಹ ಶಿಬಿರಗಳು ಮಹತ್ವದ್ದಾಗಿದ್ದು, ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಎಂ.ಎಸ್. ಶ್ರೀಧರ ಅವರು, ೧೫ ದಿನಗಳ ಕಾಲ ನಡೆದ ಶಿಬಿರದಲ್ಲಿ ಚಿತ್ರಕಲೆ, ಕರಕುಶಲೆ, ಜೇಡಿಮಣ್ಣಿನ ಕಲೆ, ಕರಾಟೆ, ಯೋಗ-ಧ್ಯಾನ, ಸಮೂಹ ನೃತ್ಯ ಹಾಗೂ ನಾಟಕ ತರಬೇತಿಗಳನ್ನು ಬೆಳಿಗ್ಗೆ ೮ರಿಂದ ಮಧ್ಯಾಹ್ನ ೨ರವರೆಗೆ ನೀಡಲಾಗಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ಸುಮಾರು ೧೨೦ ಮಕ್ಕಳು ಪಾಲ್ಗೊಂಡಿದ್ದು, ಪೋಷಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಮಹೇಶ್ ಧೂಪೆ, ಸುಧೇಶ್ ಕುಮಾರ್ ಮೋರೆ, ನೇಹಾ ಕಾಂಬಳೆ, ದೇವಿಂದರ್ ಮಾಳಗೆ ಮತ್ತು ರಾಜಕುಮಾರ್ ಅರುಣಾ ಸಾಗರ ಅವರು ತರಬೇತಿ ನೀಡಿದರು.
ಕಾರ್ಯಕ್ರಮವನ್ನು ಸಂಯೋಜಕರಾದ ಸೂರ್ಯಕಾಂತ ಮೊರೆ ಅವರು ನಿರೂಪಿಸಿದರು. ಸುವಿತ್ ಎಸ್. ಮೊರೆ ಅವರು ವಂದನಾರ್ಪಣೆ ಮಾಡಿದರು.






















