Home ಜಿಲ್ಲೆ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಜಿಲ್ಲಾ ಒಕ್ಕೂಟದ ನಿರಂತರ ಶ್ರಮ: ಎಂ.ಸಿ. ಮುಲ್ಲಾ

ಸಹಕಾರ ಕ್ಷೇತ್ರದ ಬೆಳವಣಿಗೆಗೆ ಜಿಲ್ಲಾ ಒಕ್ಕೂಟದ ನಿರಂತರ ಶ್ರಮ: ಎಂ.ಸಿ. ಮುಲ್ಲಾ

ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೧೭:ಜಿಲ್ಲೆಯ ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳ ಅಭಿವೃದ್ಧಿಗೆ ಪೂರಕವಾಗಿ ಜಿಲ್ಲಾ ಸಹಕಾರ ಯೂನಿಯನ್ ನಿರಂತರವಾಗಿ ವಿವಿಧ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಂ.ಸಿ. ಮುಲ್ಲಾ ಹೇಳಿದರು.
ನಗರದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ೨೦೨೫-೨೬ನೇ ಸಾಲಿನ ೮೯ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಸಹಕಾರ ಸಂಘಗಳು ಹಾಗೂ ಬ್ಯಾಂಕ್‌ಗಳ ಸಹಭಾಗಿತ್ವ ಅತ್ಯಂತ ಮಹತ್ವದ್ದಾಗಿದೆ. ಸಹಕಾರ ಕ್ಷೇತ್ರದ ಚಟುವಟಿಕೆಗಳನ್ನು ಜಿಲ್ಲೆಯ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಯೂನಿಯನ್ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಸಹಕಾರ ಇಲಾಖೆಯ ಮಾರ್ಗದರ್ಶನದಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದ ವಿಶೇಷ ಕಾರ್ಯಕ್ರಮಗಳು, ಮಹಿಳಾ ತರಬೇತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ತರಬೇತಿ, ಯುವಜನ ತರಬೇತಿ, ಪ್ರಬಂಧ ಸ್ಪರ್ಧೆ ಹಾಗೂ ಸಹಕಾರ ಸಪ್ತಾಹ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ಸಹಕಾರಿಗಳು ಮತ್ತು ಸಹಕಾರ ಸಂಘಗಳ ಪದಾಧಿಕಾರಿಗಳ ಸಹಕಾರದಿಂದ ಈ ಕಾರ್ಯಕ್ರಮಗಳು ಯಶಸ್ವಿಯಾಗುತ್ತಿವೆ. ಇದಕ್ಕಾಗಿ ಜಿಲ್ಲಾ ಸಹಕಾರ ಯೂನಿಯನ್ ಆಡಳಿತ ಮಂಡಳಿಯ ಪರವಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಮಾತನಾಡಿ, ಜಿಲ್ಲಾ ಸಹಕಾರ ಯೂನಿಯನ್‌ನಲ್ಲಿ ನಿರಂತರವಾಗಿ ತರಬೇತಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಎಲ್ಲ ಕಾರ್ಯಕ್ರಮಗಳಿಗೂ ಸಹಕಾರಿಗಳನ್ನು ಆಹ್ವಾನಿಸುತ್ತಿರುವುದು ಸಹಕಾರ ಕ್ಷೇತ್ರದ ಪ್ರಗತಿಯ ಸಂಕೇತವಾಗಿದೆ ಎಂದರು.
ನಿರ್ದೇಶಕಿ ಸಂಯುಕ್ತಾ ಎಸ್. ಪಾಟೀಲ ಅವರು ಸಸಿಗೆ ನೀರೆರೆಯುವ ಮೂಲಕ ಸಭೆಗೆ ಚಾಲನೆ ನೀಡಿ ಮಾತನಾಡಿ, ಹಿರಿಯ ಸಹಕಾರಿಗಳ ಸಹಕಾರದಿಂದ ಜಿಲ್ಲೆಯಲ್ಲಿ ಸಹಕಾರ ಚಳವಳಿ ವ್ಯಾಪಕವಾಗಿ ಬೆಳೆಯುತ್ತಿದೆ. ಸಹಕಾರ ಕ್ಷೇತ್ರದ ಪ್ರಯೋಜನಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಕೆ.ಬಿ. ಪಾಟೀಲ, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಎನ್.ಎಸ್. ಅಮರಗೊಂಡ, ನಿರ್ದೇಶಕರಾದ ಎಸ್.ಎಸ್. ತಳೇವಾಡ, ಶ್ರೀಹರ್ಷ ಪಾಟೀಲ, ಎಸ್.ಜೆ. ಇಂದಿ, ವಿ.ಬಿ. ಪಾಟೀಲ, ಸಿ.ಎಸ್. ಪಾಟೀಲ, ಬಿ.ಎಂ. ಕುಂಬಾರ, ಬಿ.ಎಸ್. ಹುಡೇದ, ಸಿ.ಎಸ್. ಮಳ್ಯದ, ಸುರೇಶಗೌಡ ಬಿರಾದಾರ, ಎಸ್.ಎಸ್. ವಾರದ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎನ್. ಪಾರಗೊಂಡ, ಜಿಲ್ಲಾ ಸಹಕಾರ ಶಿಕ್ಷಕ ಪೀರಪ್ಪ ಎಸ್. ಕಣಮೇಶ್ವರ, ದ್ವಿತೀಯ ದರ್ಜೆ ಸಹಾಯಕ ಎಸ್.ಎನ್. ಕುಲಕರ್ಣಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.