Home ಜಿಲ್ಲೆ ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ

ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ

ಧಾರವಾಡ, ಫೆ.19: ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಅಣ್ಣಿಗೇರಿ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ, ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಇಲಾಖಾ ಕಾರ್ಯಕ್ರಮಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಮತ್ತು ಅಣ್ಣಿಗೇರಿ ತಾಲೂಕಿನ ವಿವಿಧ ಗ್ರಾಮಗಳಿಂದ ಹಾಗೂ ಅಣ್ಣಿಗೇರಿ ಪಟ್ಟಣದಿಂದ ಆಗಮಿಸಿದ್ದ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.


ಸಾಸ್ವಿಹಳ್ಳಿ ಗ್ರಾಮಸ್ಥರು ಮನವಿ ಸಲ್ಲಿಸಿ, ಗ್ರಾಮಕ್ಕೆ ಸ್ಮಶಾನ ಭೂಮಿ ಮಂಜೂರಿಯಾಗಿದ್ದು, ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ಮತ್ತು ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ಸುತ್ತಲಿನ ಹೊಲ, ಗದ್ದೆಗಳ ನೀರು ನಿಲ್ಲುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ರಸ್ತೆ ಎತ್ತರಗೊಳಿಸಿ, ಬ್ರಿಡ್ಜ್ ನಿರ್ಮಿಸಬೇಕು. ಅಥವಾ ಸಾಧ್ಯವಾದರೆ ಸ್ಮಶಾನಕ್ಕೆ ಬೇರೆ ಜಾಗ ಗುರುತಿಸಬೇಕೆಂದು ಮನವಿ ಮಾಡಿದರು. ಈ ಕುರಿತು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಅಣ್ಣಿಗೇರಿ ಪಟ್ಟಣದ ನಿವಾಸಿಗಳು ಪಟ್ಟಣದ ರಸ್ತೆ, ಒಳಚರಂಡಿ ಹಾಗೂ ಉದ್ಯಾನವನಗಳನ್ನು ಉನ್ನತೀಕರಿಸಬೇಕೆಂದು ಅರ್ಜಿ ಸಲ್ಲಿಸಿದರು. ರೈತ ಮುಖಂಡರು ಬೆಳೆ ಪರಿಹಾರ, ಬೆಳೆ ವಿಮೆ, ಗ್ರಾಮೀಣ ರಸ್ತೆ ದುರಸ್ತಿ ಹಾಗೂ ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ಖರೀದಿ ಕೇಂದ್ರಗಳ ಕಾರ್ಯನಿರ್ವಹಣೆ ಬಗ್ಗೆ ಮನವಿ ಸಲ್ಲಿಸಿ, ಸೂಕ್ತ ಕ್ರಮಕೈಗೊಳ್ಳಲು ವಿನಂತಿಸಿದರು.


ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವುದು ಅತ್ಯಂತ ಮುಖ್ಯವಾಗಿದೆ. ಗ್ರಾಮ ಪಂಚಾಯತ್ ಹಾಗೂ ಶಹರ ಮಟ್ಟದಲ್ಲಿ ನಿಯಮಿತವಾಗಿ ಸ್ವಚ್ಛತಾ ಅಭಿಯಾನ ನಡೆಸಬೇಕು. ಒಳಚರಂಡಿ ವ್ಯವಸ್ಥೆ, ಕಸದ ವಿಲೇವಾರಿ ಮತ್ತು ಕುಡಿಯುವ ನೀರಿನ ಸ್ವಚ್ಛತೆ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ, ಜಿಲ್ಲಾಧಿಕಾರಿಗಳು ಸೂಚಿಸಿದರು.
ತಹಶೀಲ್ದಾರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಂದ ತೆರಿಗೆ ವಸೂಲಾತಿ ಪ್ರಗತಿ, ಬಾಕಿ ಪ್ರಕರಣಗಳು ಮತ್ತು ಆನ್‍ಲೈನ್ ಸೇವೆಗಳ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ತೆರಿಗೆ ಸಂಗ್ರಹಣೆಯಲ್ಲಿ ಪಾರದರ್ಶಕತೆ ಮತ್ತು ವೇಗ ಹೆಚ್ಚಿಸಲು ತಿಳಿಸಿದರು. ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಚೇರಿ ಸೇವೆಗಳು ಸಮಯಕ್ಕೆ ಸರಿಯಾಗಿ ದೊರಕಬೇಕು. ಜನರಿಂದ ಬಂದ ಪ್ರತಿಯೊಂದು ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿ, ಶೀಘ್ರ ಪರಿಹಾರ ನೀಡಬೇಕು ಎಂದು ಅವರು ಹೇಳಿದರು.


ಈ ಸಂದರ್ಭದಲ್ಲಿ ಪ್ರೊಬೇಷನರ್ ಐಎಎಸ್ ಅಧಿಕಾರಿ ರಿತೀಕಾ ವರ್ಮಾ, ಅಣ್ಣಿಗೇರಿ ತಹಶೀಲ್ದಾರ ಎಮ್.ಜಿ. ದಾಸಪ್ಪನವರ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಇ.ಆರ್.ಬಡೆಖಾನ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ಅಣ್ಣಿಗೇರಿ ಪುರಸಭೆಯ ಮುಖ್ಯಾಧಿಕಾರಿ ವಾಯ್.ಜಿ.ಗದ್ದಿಗೌಡರ, ಕಂದಾಯ ನಿರೀಕ್ಷಕ ರೀಷಿ ಸಾರಂಗಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಇದ್ದರು.


ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಅಣ್ಣಿಗೇರಿ ತಾಲೂಕಿನಲ್ಲಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಪ್ರಜಾಸೌಧದ ಸ್ಥಳಕ್ಕೆ ಭೇಟಿ ನೀಡಿದರು.