Home ಜಿಲ್ಲೆ ಬೆಂಗಳೂರು ಭಾರತಿ ವಿದ್ಯಾಸಂಸ್ಥೆಯ ಉಚಿತ ನೋಟ್ ಪುಸ್ತಕ ವಿತರಣೆ

ಭಾರತಿ ವಿದ್ಯಾಸಂಸ್ಥೆಯ ಉಚಿತ ನೋಟ್ ಪುಸ್ತಕ ವಿತರಣೆ

ಚಿಕ್ಕಬಳ್ಳಾಪುರ.ಜು.೨೦:ಪ್ರತಿಷ್ಠಿತ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಒಂದಾದ ನಗರದ ಮಂಗಿಶೆಟ್ಟಿ ನರಸಿಂಹಯ್ಯ ರಂಗಮ್ಮ ಟ್ರಸ್ಟ್‌ನಿಂದ ಭಾರತಿನಗರದಲ್ಲಿನ ಭಾರತಿ ವಿದ್ಯಾಸಂಸ್ಥೆಯ ೮ ಮತ್ತು ೯ ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನ ವಿತರಣೆ ಮಾಡಲಾಯಿತು.


ನೋಟು ಪುಸ್ತಕಗಳ ವಿತರಣೆ ಕಾರ್ಯಕ್ರಮಕ್ಕೂ ಮುನ್ನ ಎಂ.ಎನ್.ಆರ್ ಟ್ರಸ್ಟಿನ ಅಧ್ಯಕ್ಷ ಹಾಗೂ ಅವತಿ ಗ್ರಾಮಾಂತರ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಎಂ.ಎನ್.ಕೃಷ್ಣಮೂರ್ತಿ ಮಾತನಾಡಿ, ಅತ್ಯಂತ ಬಡತನದಲ್ಲಿ ಜನಿಸಿದ ಶ್ರೀ ಮಂಗಿಶೆಟ್ಟಿ ನರಸಿಂಹಯ್ಯ ತಮ್ಮ ದೂರ ದೃಷ್ಟಿಯಿಂದ ಬಡ ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ ಲೋಕಕಲ್ಯಾಣ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಪಣತೊಟ್ಟು ಈ ಸಂಸ್ಥೆ ಕಟ್ಟಿದ್ದಾರೆ ಎಂದರು.


ಇನ್ನು ಅವರ ಆಶಯದಂತೆ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಈ ಸೇವ ಕಾರ್ಯವನ್ನ ಮಾಡುತ್ತಾ ಬರಲಾಗಿದೆ.ಇದು ಸದ್ವಿನಿಯೋಗ ಆಗಬೇಕು.ಆಗ ಮಾತ್ರ ಇಂತಹ ಸೇವಾ ಕಾರ್ಯಕ್ರಮಗಳು ಮಾಡಿದ್ದಕ್ಕೂ ಸಾರ್ಥಕ, ಕಲಿಯುವ ಈ ಸಂದರ್ಭದಲ್ಲಿ ಶಿಸ್ತು ಸಂಯಮದೊಂದಿಗೆ ಸಮಾಜದ ಭದ್ರ ಬುನಾದಿ ಆಗಬೇಕು.ಅದೇ ರೀತಿ ಇಂತಹ ಸಾಧಕ ಮಹನೀಯರ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಭಾರತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವೇಣುಗೋಪಾಲ್ ಮಾತನಾಡಿ,ಇಂದಿನ ದಿನಮಾನದಲ್ಲಿ ಸಮಾಜದಲ್ಲಿ ಸಿರಿವಂತರು ಮತ್ತು ಬಡವರ ನಡುವೆ ಅಂತರ ಹೆಚ್ಚುತ್ತಲೇ ಇದೆ.ಗ್ರಾಮರಾಜ್ಯದ ಕನಸು ನನಸಾಗಿಲ್ಲ.ಸರ್ವರಿಗೆ ಸಮಬಾಳು,ಸರ್ವರಿಗೆ ಸಮಪಾಲು ಎಂಬ ಗಾಂಧೀಜಿ ಕಂಡ ಕನಸು ನನಸಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಶಿಕ್ಷಣದಿಂದ ಮಾತ್ರ ಸಮಾಜಕ್ಕೆ ಅಂಟಿರುವ ಅಸ್ಪೃಶ್ಯತೆ, ಜಾತೀಯತೆ ಮೌಡ್ಯತೆ ಇತರೆ ಪಿಡುಗುಗಳನ್ನು ತೊಲಗಿಸಲು ಸಾಧ್ಯ ಮಂಗಿಶೆಟ್ಟಿ ನರಸಿಂಹಯ್ಯ,ರಂಗಮ್ಮ ಟ್ರಸ್ಟ್ ಯಾವುದೇ ಜಾತಿ ಭೇದ ಧರ್ಮ ನೋಡದೆ ಇಂತಹ ಸೇವಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದ್ದಾರೆ.ಇಂತಹ ಸೇವಾ ಗುಣಗಳನ್ನು ವಿದ್ಯಾರ್ಥಿಗಳಾದ ನೀವು ಮುಂದಿನ ದಿನಗಳಲ್ಲಿ ರೂಡಿಸಿಕೊಂಡು ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನ ಅರಿತು ನಮ್ಮ ಕೈಲಾದ ಸಹಾಯ ನೀವೂ ಮಾಡಬೇಕು ಎಂದರು.


ಟ್ರಸ್ಟಿನ ಕಾರ್ಯದರ್ಶಿಉತ್ತಮ್ ಚಂದ್ ಜೈನ್ ಮಾತನಾಡಿ,ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದುವ ಹವ್ಯಾಸ ರೂಡಿಸಿಕೊಳ್ಳಿ.ದುಡಿದು ಗಳಿಸಿದ್ದರಲ್ಲಿ ಸ್ವಲ್ಪಭಾಗವನ್ನು ದೀನರಿಗೆ ನೀಡುವುದರಿಂದ ದೇವರು ಮೆಚ್ಚುತ್ತಾನೆ ಎನ್ನುವ ಪರಿಕಲ್ಪನೆ ಎಲ್ಲರಲ್ಲೂ ಮೂಡಿರಲಿ ಈ ಭಾವನೆಯಿಂದ ಮಂಗಿಶೆಟ್ಟಿ ನರಸಿಂಹಯ್ಯ,ರಂಗಮ್ಮ ಇಂತಹ ಮಹತ್ಕಾರ್ಯಕ್ಕೆ ಮುಂದಾಗಿದ್ದರು ಎಂದು ಹೇಳಿ ಸಂಸ್ಥೆಯ ಸೇವಾ ಕಾರ್ಯಗಳ ಬಗ್ಗೆ ವಿವರಿಸಿದರು.


ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮದಲ್ಲಿ ಎಂ..ಎನ್.ಆರ್ ಟ್ರಸ್ಟಿನ ಸಹ ಕಾರ್ಯದರ್ಶಿ ನರಸಿಂಹಮೂರ್ತಿ,ಟ್ರಸ್ಟಿ ಸತ್ಯನಾರಾಯಣ, ಪತ್ರಕರ್ತ ಹಾಗೂ ಟ್ರಸ್ಟಿ ಎಂ.ಕೃಷ್ಣಪ್ಪ, ವ್ಯವಸ್ಥಾಪಕ ಅಶ್ವತ್, ಮುಖ್ಯ ಶಿಕ್ಷಕ ಅಶ್ವತನಾರಾಯಣ ದೈಹಿಕ ಶಿಕ್ಷಣ ಶಿಕ್ಷಕ ಶ್ರೀನಿವಾಸ್ ಸಹ ಶಿಕ್ಷಕರಾದ ರೇಖಾ ಮತ್ತು ಮೇಘನಾ ಇದ್ದರು.