
ಚಿಕ್ಕನಾಯಕನಹಳ್ಳಿ, ಮೇ ೨೩- ಕ್ಷೇತ್ರದ ಬಡವರು ರೈತರ ಮಕ್ಕಳಿಗಾಗಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಂದೇ ಸೂರಿನಡಿಯಲ್ಲಿ ಎಲ್‌ಕೆಜಿ ಯಿಂದ ಪಿಯುಸಿಯವರೆಗೆ ಶಿಕ್ಷಣ ನೀಡುವಂತಹ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರದೊಂದಿಗೆ ಚರ್ಚಿಸಿ ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಹೇಳಿದರು.
ಪಟ್ಟಣದ ಶಾಸಕರ ಗೃಹ ಕಚೇರಿಯ ಸಭಾಂಗಣದಲ್ಲಿ ನಡೆದ ತಾಲ್ಲೂಕಿನ ಎಲ್ಲ ಶಾಲೆಗಳ ಮುಖ್ಯೊಪಾಧ್ಯಯರ ಸಭೆಯಲ್ಲಿ ಎಸ್‌ಬಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾಷವಾರು ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಗಳಿಸಲು ಕಾರಣರಾದ ಶಿಕ್ಷಕರನ್ನು ಅಭಿನಂದಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಈಗಾಗಲೇ ಪ್ರತಿ ಹೋಬಳಿಗೆ ಒಂದರಂತೆ ಮೊರಾರ್ಜಿವಸತಿ ಶಾಲೆ, ಅಂಬೇಡ್ಕರ್ ವಸತಿಶಾಲೆ, ಆಶ್ರಮ ಶಾಲೆಗಳು ಹಾಗೂ ಹುಳಿಯಾರು ಭಾಗದಲ್ಲಿ ಒಂದು ಕೆಪಿಎಸ್ ಶಾಲೆ ಇದ್ದು ಇವುಗಳಲ್ಲಿ ಕೇವಲ ಹೆಚ್ಚು ಅಂಕಗಳನ್ನು ಗಳಿಸಿದ ತಾಲ್ಲೂಕಿನ ಹಾಗೂ ಬೇರೆ ತಾಲ್ಲೂಕುಗಳ ಮಕ್ಕಳು ಶಿಕ್ಷಣ ಪಡೆಯುತ್ತಾರೆ. ಅದರೆ ನಮ್ಮ ತಾಲ್ಲೂಕಿನ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಠಿಯಿಂದ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ೨೭ ಗ್ರಾಮ ಪಂಚಾಯ್ತಿಗಳಲ್ಲೂ ಸರ್ಕಾರಿ ಜಾಗದಲ್ಲಿ ೫ ರಿಂದ ೧೦ ಎಕರೆ ಜಾಗದಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳೊಂದಿಗೆ ಮಗುವಿನ ಪ್ರಾರಂಭಿಕ ಶಿಕ್ಷಣ ಎಲ್‌ಕೆಜಿ ಯಿಂದ ಆ ಮಗು ಪಿಯುಸಿಯನ್ನು ಮುಗಿಸಿ ಹೊರಗಡೆ ಉನ್ನತ ವ್ಯಾಸಂಗಕ್ಕೆ ಹೋಗುವಂತೆ ಮಾಡುವಂತಹ ಸಂಪನ್ಮೂಲ ಶಿಕ್ಷಕರನ್ನು ಒಳಗೊಂಡಂತಹ ಸರ್ಕಾರಿ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರದ ಹಂತದಲ್ಲಿ ಮಾತುಕತೆ ನಡೆಸಿ ಚರ್ಚಿಸಲಾಗುವುದು ಎಂದರು.
ಯಾವುದೇ ಖಾಸಗಿ ಶಾಲೆಗಳಿಗೆ ಕಮ್ಮಿ ಇಲ್ಲದಂತೆ ನಮ್ಮ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಶಿಕ್ಷಣ ನೀಡುತ್ತಿದ್ದಾರೆ ಎಂಬುದಕ್ಕೆ ಈ ವರ್ಷದ ಎಸ್‌ಎಸ್‌ಎಲ್‌ಸಿ ಪಲಿತಾಂಶ ಕಾರಣವಾಗಿದೆ. ೬೨೦ ಅಂಕಗಳಿಸಿದ ಮೊರಾರ್ಜಿ ವಸತಿ ಶಾಲೆಯು ಪ್ರಥಮವಾದರೆ, ಯಳನಡು ಶಾಲೆ, ಕೆಪಿಎಸ್ ಶಾಲೆಗಳು ಮೊದಲ ಸ್ಥಾನದಲ್ಲಿವೆ. ಈ ಬಗ್ಗೆ ಎಲ್ಲ ಶಾಲೆಗಳ ಮುಖ್ಯೋಪಾಧ್ಯಯರು ತಮ್ಮಅಭಿಪ್ರಾಯಗಳನ್ನು ತಿಳಿಸಬೇಕು. ಕ್ಷೇತ್ರದ ಜನತೆಗೆ ಆರೋಗ್ಯ ಹಾಗೂ ಶಿಕ್ಷಣದ ಬಗ್ಗೆ ಯಾವುದೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತಿದ್ದು ಉತ್ತಮ ಆರೋಗ್ಯದಿಂದ ಜೀವನ ಚೆನ್ನಾಗಿದ್ದರೆ ಉತ್ತಮ ಶಿಕ್ಷಣದಿಂದ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ. ಅದ್ದರಿಂದ ಶೈಕ್ಷಣಿಕವಾಗಿ ಕ್ಷೇತ್ರವನ್ನು ಅಭಿವೃದ್ದಿಪಡಿಸುವುದು ನನ್ನ ಮುಖ್ಯ ಉದ್ದೇಶ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಮಾತನಾಡಿ, ಎಸ್‌ಎಸ್‌ಎಲ್‌ಸಿ ಉತ್ತಮ ಪಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಅಭಿನಂದಿಸಿದ ಶಾಸಕರು ನಮ್ಮ ಮೇಲೆ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ. ಮುಂದೆಯು ಇದೇ ರೀತಿಯ ಪಲಿತಾಂಶವನ್ನು ನೀಡಬೇಕು. ಈ ಫಲಿತಾಂಶಕ್ಕೆ ಶಿಕ್ಷಕರು, ಪೋಷಕರು ಹಾಗೂ ಮಕ್ಕಳ ಶ್ರಮವು ಇದೆ. ಪ್ರೇರಣಾ ಶಿಬಿರಗಳು, ಧ್ಯಾನ ಶಿಬಿರಗಳು ಅನುಕೂಲವಾಗಿದೆ. ನಮ್ಮೊಂದಿಗೆ ಇದ್ದು ತಮ್ಮ ಸಂಪೂರ್ಣ ಸಹಕಾರ ನೀಡಿದ ಶಾಸಕರ ಕಾರ್ಯವೈಖರಿ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಪ್ರೌಢಶಿಕ್ಷಕರ ಸಂಘದ ಅಧ್ಯಕ್ಷ ಗಂಗಾಧರ್, ದೈಹಿಕ ಶಿಕ್ಷಕರ ಸಂಘದ ಕೇಶವಮೂರ್ತಿ, ಸುರೇಶ್, ನೌಕರರ ಸಂಘದ ಅದ್ಯಕ್ಷ ಪರಶಿವಮೂರ್ತಿ, ಸತೀಶ್, ಅನಿಲ್ ಸೇರಿದಂತೆ ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.