ಚಳಿಗಾಲದ ಅಧಿವೇಶನದಲ್ಲಿ ಗ್ರಾ.ಪಂ.ನೌಕರರ ಬೇಡಿಕೆ ಬಗ್ಗೆ ಚರ್ಚಿಸಿ

ಕಲಬುರಗಿ,ನ.22-ಗ್ರಾಮ ಪಂಚಾಯತ ನೌಕರರ ಪ್ರಮುಖ ಬೇಡಿಕೆಗಳ ಕುರಿತು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ (ಸಿಐಟಿಯು ಸಂಯೋಜಿತ) ತಾಲ್ಲೂಕ ಸಮಿತಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರಿಗೆ ಮನವಿ ಮಾಡಿದೆ.
ಸಂಘದ ಅಧ್ಯಕ್ಷ ನಾಗರಾಜ ಜಿ.ಬಂಗೂರ, ಕಾರ್ಯದರ್ಶಿ ಜೈಭೀಮ ಹೊಸಮನಿ, ಖಜಾಂಚಿ ರಾಜು ಪೂಜಾರಿ ಸೇರಿದಂತೆ ಮತ್ತಿತರರು ಮನವಿ ಪತ್ರ ಸಲ್ಲಿಸಿದ್ದು, ರಾಜ್ಯದಲ್ಲಿ ಸುಮಾರು 63 ಸಾವಿರ ಗ್ರಾಮ ಪಂಚಾಯತ ನೌಕರರು, ಕರ ವಸೂಲಿಗಾರರಾಗಿ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‍ಗಳಗಾಗಿ, ಸ್ವಚ್ಛತಾಗಾರರಾಗಿ, ಸಿಪಾಯಿ ಮತ್ತು ವಾಟರ್‍ಮನ್‍ಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೊರಾಟದ ಫಲವಾಗಿ ಪಂಚಾಯತ ನೌಕರರನ್ನು ಕನಿಷ್ಟ ವೇತನ ಕಾಯ್ದೆ ಅಡಿಯಲ್ಲಿ ಸೇರಿಸಲಾಗಿದೆ. ಪಂಚಾಯತ್ ಮಟ್ಟದಲ್ಲಿ ಸ್ವಚ್ಛವಾಹಿನಿ ನೌಕರರು ಎಂದು ತರಬೇತಿ ನೀಡಿ ಸಂಜೀವಿನಿ ಒಕ್ಕೂಟದಿಂದ ನೇಮಕಾತಿ ಮಾಡಿಕೊಂಡು ಗುತ್ತಿಗೆ ಆಧಾರದ ಮೇಲೆ ದುಡಿಸಿಕೊಳ್ಳಲಾಗುತ್ತಿದೆ. ಆದ್ದರಿಂದ ಗ್ರಾಮ ಪಂಚಾಯತ ನೌಕರರನ್ನು ಪಂಚಾಯತ್ ನೌಕರರು ಎಂದು ಪರಿಗಣಿಸಬೇಕು ಮತ್ತು ನಿಗದಿತ ವೇತನ ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.