
ಸಂಜೆವಾಣಿ ವಾರ್ತೆ,
ವಿಜಯಪುರ, ಆ. ೧೩:ಸಹಕಾರಿ ಸಂಸ್ಥೆಯ ಆರ್ಥಿಕ ಪ್ರಗತಿಗೆ ಶಿಸ್ತು ಅತ್ಯಂತ ಅಗತ್ಯ. ಸದಸ್ಯರು ಪಡೆದ ಸಾಲವನ್ನು ನಿಗದಿತ ಸಮಯಕ್ಕೆ ಮರುಪಾವತಿಸಿದಾಗ ಮಾತ್ರ ಸಂಸ್ಥೆಯ ಆರ್ಥಿಕ ಸ್ಥಿತಿ ಸದೃಢವಾಗಿ, ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ಸದಸ್ಯರೂ ಸಾಲ ಮರುಪಾವತಿಗೆ ಆದ್ಯತೆ ನೀಡಿ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ಸಿಎ ಚಂದ್ರಕಾAತ ಕಪಟಕರ ಹೇಳಿದರು.
ನಗರದ ಭಾವಸಾರ ಕೋ-ಆಪ್. ಕ್ರೆಡಿಟ್ ಸೊಸೈಟಿಯ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಹಕಾರಿ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಇತ್ತೀಚೆಗೆ ಹಲವು ಕಾನೂನು ಹಾಗೂ ಆಡಳಿತಾತ್ಮಕ ಬದಲಾವಣೆಗಳಾಗಿವೆ. ನಿರ್ದೇಶಕ ಮಂಡಳಿಯ ಜವಾಬ್ದಾರಿ, ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಸಾಲ ವಸೂಲಾತಿ ಕುರಿತು ಅವರು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಸಹಕಾರಿ ಸಂಸ್ಥೆಗಳ ಆಡಳಿತಕ್ಕೆ ಸಂಬAಧಿಸಿದ ನಿಯಮಗಳು ಕಾಲಕಾಲಕ್ಕೆ ಬದಲಾಗುತ್ತಿದ್ದು, ಸೆ.೧೧, ೨೦೨೫ರಂದು ಅಥವಾ ನಂತರ ಜಾರಿಗೆ ಬಂದಿರುವ ಹೊಸ ನಿಯಮಗಳ ಕುರಿತು ನಿರ್ದೇಶಕ ಮಂಡಳಿಯ ಪ್ರತಿಯೊಬ್ಬ ಸದಸ್ಯರೂ ಮಾಹಿತಿ ಹೊಂದಿರುವುದು ಅಗತ್ಯ. ಸಾಂಪ್ರದಾಯಿಕ ಪದ್ಧತಿಗಳಿಗೆ ಸೀಮಿತವಾಗದೆ, ಸರ್ಕಾರದ ಹೊಸ ನಿಯಮಗಳು ಹಾಗೂ ಕಾನೂನುಬದ್ಧ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ತಿಳಿಸಿದರು.
ನಿರ್ದೇಶಕರು ತಮ್ಮ ಜವಾಬ್ದಾರಿಯನ್ನು ಅರಿತು ಸಂಸ್ಥೆಯ ಆರ್ಥಿಕ ವ್ಯವಹಾರಗಳ ಮೇಲೆ ಸೂಕ್ತ ನಿಗಾ ವಹಿಸಬೇಕು. ಯಾವುದೇ ರೀತಿಯ ಅಕ್ರಮ ಅಥವಾ ಅವ್ಯವಹಾರ ನಡೆಯದಂತೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದರು.
ಜಾರಿಯಲ್ಲಿರುವ ನಿಯಮಗಳ ಪ್ರಕಾರ ನಿರ್ದೇಶಕ ಮಂಡಳಿ ಸದಸ್ಯರು ತಮ್ಮ ಆಸ್ತಿಯನ್ನು ಘೋಷಿಸುವುದು ಅಗತ್ಯ. ಸಂಬAಧಿತ ಕಾನೂನುಬದ್ಧ ನಿಬಂಧನೆಗಳನ್ವಯ ಪತಿ ಅಥವಾ ಪತ್ನಿ ಹಾಗೂ ಅವಿವಾಹಿತ ಪುತ್ರ, ಪುತ್ರಿಯರ ಆಸ್ತಿ ಘೋಷಣೆ ಅಗತ್ಯವಿದ್ದಲ್ಲಿ ಅದನ್ನೂ ಸೂಕ್ತ ರೀತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಸಂಸ್ಥೆಯಲ್ಲಿ ಆರ್ಥಿಕ ಅವ್ಯವಹಾರ ಅಥವಾ ಗಂಭೀರ ಅಕ್ರಮ ನಡೆದರೆ ಸಂಬAಧಪಟ್ಟವರ ಮೇಲೆ ಕಾನೂನು ಪ್ರಕಾರ ಹೊಣೆಗಾರಿಕೆ ನಿಗದಿಯಾಗಬಹುದು. ಆದ್ದರಿಂದ ಪ್ರತಿಯೊಂದು ಆರ್ಥಿಕ ವ್ಯವಹಾರವನ್ನೂ ಪರಿಶೀಲಿಸಿ ಪಾರದರ್ಶಕತೆ ಮತ್ತು ಕಾನೂನುಬದ್ಧ ಶಿಸ್ತು ಕಾಪಾಡಬೇಕು ಎಂದು ಸಲಹೆ ನೀಡಿದರು.
ಸಾಲ ವಸೂಲಾತಿಯೇ ಸಂಸ್ಥೆಯ ಪ್ರಗತಿಯ ಬೆನ್ನೆಲುಬು
ಸೊಸೈಟಿ ಅಧ್ಯಕ್ಷ ರಾಜೇಶ ದೇವಗಿರಿ ಮಾತನಾಡಿ, ಸಾಲ ವಸೂಲಾತಿಯೇ ಸಂಸ್ಥೆಯ ಪ್ರಗತಿಯ ಬೆನ್ನೆಲುಬಾಗಿದೆ. ಸದಸ್ಯರು ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸದಿದ್ದರೆ ಸಂಸ್ಥೆಯ ಆರ್ಥಿಕ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸಾಲ ಪಡೆದವರು ತಮ್ಮ ಜವಾಬ್ದಾರಿಯನ್ನು ಅರಿತು ಕಂತುಗಳನ್ನು ನಿಗದಿತ ಸಮಯಕ್ಕೆ ಪಾವತಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಯಶಸ್ವಿನಿ ವೈದ್ಯಕೀಯ ನೆರವು ಯೋಜನೆಯ ಪ್ರಯೋಜನವನ್ನು ಸದಸ್ಯರು ಪಡೆದುಕೊಳ್ಳಬೇಕು ಎಂದರು.
ಸAಸ್ಥೆಯ ಆರ್ಥಿಕ ಶಿಸ್ತು, ಸದಸ್ಯರ ವಿಶ್ವಾಸ ಹಾಗೂ ನಿರ್ದೇಶಕ ಮಂಡಳಿಯ ಪಾರದರ್ಶಕ ಕಾರ್ಯವಿಧಾನಗಳು ಸೊಸೈಟಿಯ ಪ್ರಗತಿಗೆ ಪ್ರಮುಖ ಅಂಶಗಳಾಗಿವೆ. ಇವುಗಳ ನಡುವೆ ಸಮನ್ವಯವಿದ್ದರೆ ಸಂಸ್ಥೆ ಇನ್ನಷ್ಟು ಬಲಿಷ್ಠವಾಗಿ ಮುನ್ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದಸ್ಯರ ಹಿತಕ್ಕೆ ಆದ್ಯತೆ ನೀಡಿ ಸಂಸ್ಥೆಯ ಆಡಳಿತವನ್ನು ಮತ್ತಷ್ಟು ಪಾರದರ್ಶಕ ಮತ್ತು ಶಿಸ್ತುಬದ್ಧಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ಸಭೆಯಲ್ಲಿ ಸಂಸ್ಥೆಯ ಆರ್ಥಿಕ ವ್ಯವಹಾರಗಳ ಪರಿಶೀಲನೆ, ಸಾಲ ವಿತರಣೆ ಮತ್ತು ವಸೂಲಾತಿ, ಸದಸ್ಯರಿಗಾಗಿ ಜಾರಿಯಲ್ಲಿರುವ ವಿವಿಧ ಯೋಜನೆಗಳು, ಭವಿಷ್ಯದ ಕಾರ್ಯಯೋಜನೆ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಬದಲಾಗುತ್ತಿರುವ ನಿಯಮಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ದೀಪಕ ಶಿಂತ್ರೆ, ನಿರ್ದೇಶಕರಾದ ಅಡ್ವೊಕೇಟ್ ಅಶೋಕ ಮಿರಜಕರ, ಅಡ್ವೊಕೇಟ್ ಟಿ.ಡಿ. ಜವಳಕರ, ವಿಜಯ ನವಲೆ, ಶ್ರೀಕಾಂತ ದೇವಗಿರಿ, ಶ್ರೀನಿವಾಸ ಜವಳಕರ, ವಿಜಯ ಸುಲಾಖೆ, ಸೌ. ದೀಪಾ ಇಜಂತಕರ, ಕಾರ್ಯದರ್ಶಿ ಗಣೇಶ ದೇವಗಿರಿ, ಆರ್.ಟಿ. ಉತ್ತರಕರ ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಪರಶುರಾಮ ಜಾನೋಜಿ ಸ್ವಾಗತಿಸಿದರು. ಸೌ. ನಿರ್ಮಲಾ ಸಾರವಾಡ ನಿರೂಪಿಸಿದರು. ಪರಶುರಾಮ ಜಾನೋಜಿ ವಂದಿಸಿದರು.































