Home ಕ್ರೈಂ ಸುದ್ದಿಗಳು ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ತಪ್ಪಿದ ಅನಾಹುತ:ಹಿಮ್ಮುಖವಾಗಿ ಚಲಿಸಿ ಬಸ್ ಡಿಪೋ ಗೇಟ್ ಗೆ ಡಿಕ್ಕಿ ಹೊಡೆದ...

ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ತಪ್ಪಿದ ಅನಾಹುತ:ಹಿಮ್ಮುಖವಾಗಿ ಚಲಿಸಿ ಬಸ್ ಡಿಪೋ ಗೇಟ್ ಗೆ ಡಿಕ್ಕಿ ಹೊಡೆದ ಬಸ್

ಮುದ್ದೇಬಿಹಾಳ: ಪಟ್ಟಣದ ಬಸ್ ನಿಲ್ದಾಣದಲ್ಲಿ ಚಾಲಕನಿಲ್ಲದೇ ಬಸ್ ಏಕಾಏಕಿ ಹಿಂಬಿದಿ ಮುಖವಾಗಿ ಚಲಿಸಿ ಬಸ್ ಡಿಪೋ ಗೇಟ್ ಗೆ ಡಿಕ್ಕಿ ಹೊಡೆದ ಘಟನೆ ಸೋಮವಾರರಂದು ನಡೆದಿದೆ.ಅಧೃಷ್ಟವಶಾತ್ ಯಾವದೇ ಪ್ರಾಣಾಪಾಯ ಸಂಭವಿಸಿಲ್ಲ.
ಶೀಗಿ ಹುಣ್ಣಿಮೆ ನಿಮಿತ್ಯ ಶ್ರೀ ಯಲ್ಲಮ್ಮದೇವಿ ದರ್ಶನಕ್ಕೆ ತೆರಳಲು ಮುಂಜಾನೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದರು. ನಿರ್ವಾಹಕರು ಬಸ್ ಡ್ಯೂಟಿ ಎಂಟ್ರಿ ಮಾಡಿಸಲು ತೆರಳಿದ್ದ ಸಮಯದಲ್ಲಿ ಬಸ್ ಹತ್ತಲು ಪ್ರಯಾಣಿಕರು ಮುಗಿಬಿದ್ದ ಪರಿಣಾಮ ಬಸ್ಸಿನ ಮುಂಭಾಗ ಹಾಗೂ ಹಿಂಭಾಗದ ಬಾಗಿಲುಗಳ ಬಳಿ ನೂಕುನುಗ್ಗಲು ಉಂಟಾಗಿತ್ತು. ಈ ಸಂದರ್ಭದಲ್ಲಿ ಓರ್ವ ಮಹಿಳಾ ಪ್ರಯಾಣಿಕೆ ಚಾಲಕನ ಬಾಗಿಲಿನಿಂದ ಬಸ್ ಏರಿ ಕ್ಲಚ್ ಮೇಲೆ ಕಾಲಿಟ್ಟ ಪರಿಣಾಮ ಬಸ್ ಹಿಂಬದಿ ಮುಖವಾಗಿ ಚಲಿಸಿ ನಿಲ್ದಾಣದ ಬಳಿಯ ಡಿಪೋ ಗೇಟ್ ಗೆ ಡಿಕ್ಕಿ ಹೊಡೆದು ನಿಂತಿದೆ ಘಟನೆಯಿಂದ ಕೆಲಕಾಲ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಆದರೆ ಯಾವದೇ ಅನಾಹುತ, ಪ್ರಾಣಾಪಾಯ ಸಂಭವಿಸಿಲ್ಲವೆಂದು ತಿಳಿದುಬಂದಿದೆ.
ಚಾಲಕನು ಬಸ್ ಕಂಟ್ರೋಲ್ ರೂಮ್‍ಗೆ ತೆರಳಿ ಚಾಲನೆಗೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಳಿಸಿ ಮರಳುವಷ್ಟರಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬಸ್ ಹಿಂಬದಿಗೆ ಚಲಿಸುತ್ತಿರುವುದನ್ನು ಗಮನಿಸಿದ ಚಾಲಕ ತಕ್ಷಣ ಸ್ಥಳಕ್ಕೆ ಧಾವಿಸಿ ಬಸ್ಸನ್ನು ನಿಯಂತ್ರಣಕ್ಕೆ ತಂದಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ಬಸ್ ಘಟಕದ ವ್ಯವಸ್ಥಾಪಕರನ್ನು ಪತ್ರಿಕೆ ವಿಚಾರಿಸಿದಾಗ ಅವರು ಘಟನೆಯ ಬಗ್ಗೆ ಮಾಹಿತಿ ನೀಡಿದರು.
ಯಲ್ಲಮ್ಮ ದೇವಿ ದರ್ಶನದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಬಸ್ ಹತ್ತುವ ಸಂದರ್ಭದಲ್ಲಿ ಉಂಟಾಗುವ ನೂಕುನುಗ್ಗಲು ನಿಯಂತ್ರಿಸಲು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ.