ಜೇವರ್ಗಿ ತಾಲೂಕಿನ ಅನಧಿಕೃತ ಕ್ಲಿನಿಕ್ ಮೇಲೆ ಡಿ.ಎಚ್.ಓ ದಾಳಿ

ಕಲಬುರಗಿ,ಆ.28: ಜಿಲ್ಲೆಯ ಜೇವರ್ಗಿ ಪಟ್ಟಣ ಮತ್ತು ತಾಲೂಕಿನ ನೆಲೋಗಿ, ಸೊನ್ನಾ ಕ್ರಾಸ್ ಗ್ರಾಮದಲ್ಲಿನ ನಕಲಿ ವೈದ್ಯರ ಅನಧಿಕೃತ ಕ್ಲಿನಿಕ್ ಗಳ ಮೇಲೆ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ್ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ದಾಳಿ ನಡೆಸಿತ್ತು.

ಯಾವುದೇ ಕಾರಣಕ್ಕೂ ಮುಂದೆ ಕ್ಲಿನಿಕ್ ಗಳನ್ನು ತೆರೆಯದಂತೆ ನಕಲಿ ವೈದ್ಯರಿಗೆ ಎಚ್ಚರಿಕೆ ನೀಡಿ ಕ್ಲಿನಿಕ್ ಗಳನ್ನು ಮುಚ್ಚಿಸಲಾಯಿತು. ಇಂದಿನ ಸೂಚನೆ ಹೊರತಾಗಿಯೂ ಕ್ಲಿನಿಕ್ ತೆರೆದಲ್ಲಿ 25 ಸಾವಿರ ರೂ. ದಂಡ ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಡಾ.ಶರಣಬಸಪ್ಪ ಕ್ಯಾತನಾಳ್ ಅವರು, ಈ ಕ್ಲಿನಿಕ್ ಗಳ ಮೇಲೆ ನಿಗಾ ಇರಿಸುವಂತೆ ಆರೋಗ್ಯ ನಿರೀಕ್ಷಕರು, ಸಮುದಾಯ ಆರೋಗ್ಯಾಧಿಕಾರಿ, ಆಶಾ ಕಾರ್ಯರ್ತೆಯರಿಗೆ ಸೂಚನೆ ನೀಡಿದರು.

ದಾಳಿ ಸಮಯದಲ್ಲಿ ಜೇವರ್ಗಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಉಮೇಶ ಶರ್ಮಾ, ನೆಲೋಗಿ ಸಮುದಾಯದ ಅರೋಗ್ಯ ಕೇಂದ್ರದ ಆಡಳಿತ ವೈದ್ಯಧಿಕಾರಿ ಡಾ. ಬಸವರಾಜ ಕವಲಗಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಾಮರಾವ್, ಸಿಬ್ಬಂದಿ ಆಕಾಶ್ ರೆಡ್ಡಿ ಸೇರಿದಂತೆ ಇನ್ನಿತರರು ಇದ್ದರು.