
ತಿಪಟೂರು, ನ. ೨೯- ತಾಲ್ಲೂಕಿನ ಚಿಕ್ಕಹೊನ್ನವಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರ ಜನ್ಮದಿನದ ಅಂಗವಾಗಿ ಮುಕ್ತಿಧಾಮ ಸ್ವಚ್ಚತಾ ಕಾರ್ಯಕ್ರಮ ನೇರವೇರಿಸಲಾಯಿತು.
ಗ್ರಾಮಸ್ಥರ ಸಮ್ಮುಖದಲ್ಲಿ ಮುಕ್ತಿಧಾಮದಲ್ಲಿ ಬೆಳೆದಿದ್ದ ಗಿಡಗಂಟೆ ಹಾಗೂ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಚಗೊಳಿಸಲಾಯಿತು.
ನಂತರ ಮಾತನಾಡಿದ ತಾಲ್ಲೂಕು ಯೋಜನಾಧಿಕಾರಿ ಉದಯ್ ಕೆ., ರಾಜ್ಯದ ಬಡವರ ಏಳ್ಗೆ ಹಾಗೂ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಮೊದಲಿಗೆ ಬೆಳ್ತಂಗಡಿಯಲ್ಲಿ ಪ್ರಾರಂಭಿಸಿ ಇಂದು ೬.೫ ಲಕ್ಷ ಸಂಘಗಳು ೫೫ ಲಕ್ಷ ಪಾಲುದಾರ ಬಂಧುಗಳನ್ನೊಳಗೊಂಡು ಸರಿ ಸುಮಾರು ರಾಜ್ಯದ ೨ ಕೋಟಿ ಕುಟುಂಬಗಳಿಗೆ ಆಧಾರದ ಸಹಕಾರದ ದೀಪವಾಗಿದ್ದಾರೆ ಎಂದರು.
ಬಹುಮುಖ್ಯವಾಗಿ ವಾತ್ಸಲ್ಯ ಕಾರ್ಯಕ್ರಮದಲ್ಲಿ ನಿರ್ಗತಿಕರಿಗೆ ಮನೆ, ಅನಾಥರಿಗೆ ಔಷಧಿ ಮಾಸಾಶನದ ರೂಪದಲ್ಲಿ ಒದಗಿಸಲಾಗುತ್ತಿದೆ. ಧರ್ಮಸ್ಥಳದ ೯೫೦೦ ಸಾಮಾನ್ಯ ಸೇವಾ ಕೇಂದ್ರಗಳಿಂದ ಬಡವರಿಗೆ ಇದುವರೆಗೂ ೫.೩ ಕೋಟಿ ಸೇವೆ ನೀಡಿದೆ. ಸಾಮಾಜಿಕ ಅರಣ್ಯೀಕರಣದ ಅಡಿಯಲ್ಲಿ ದಶಲಕ್ಷ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಗಿದೆ. ಧಾರವಾಡದಲ್ಲಿ ಬಹುಕೋಟಿ ವೆಚ್ಚದ ಸಿರಿಧಾನ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದೆ.
ರಾಜ್ಯದ ಕೆರೆ ಅಭಿವೃದ್ಧಿ, ಜನಮಂಗಲ ಗ್ರಾಮ ಕಲ್ಯಾಣಕ್ಕಾಗಿ ಇದುವರೆಗೂ ೯೬ ಕೋಟಿ ವಿನಿಯೋಗಿಸಿ ರೈತರ ಸಂಘಟನೆ, ಕೃಷಿ ತರಬೇತಿ, ಯಾಂತ್ರೀಕೃತ ಕೃಷಿಯ ಮೂಲಕ ಸೌಲಭ್ಯಗಳನ್ನು ಒದಗಿಸುವ ಜತೆಗೆ ೧೨ ಜಿಲ್ಲೆಗಳಲ್ಲಿ ಶುದ್ಧಗಂಗಾ ಘಟಕ ಸ್ಥಾಪಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಶಿಕ್ಷಣ ವಿಭಾಗದಲ್ಲಿ ವಿದ್ಯಾರ್ಥಿ ವೇತನದ ರೂಪದಲ್ಲಿ ೨೪ ಕೋಟಿ ರೂ ವ್ಯಯಿಸಿದ್ದು, ಶಾಲೆಗಳಿಗೆ ಡೆಸ್ಕ್, ಬೆಂಚ್ ಹಾಗೂ ಜ್ಞಾನದೀಪ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಜನೆಗೆ ಸಹಾಯ ನೀಡುತ್ತಿದ್ದಾರೆ ಎಂದರು.
ಇದುವರೆಗೂ ರಾಜ್ಯದ ೩೩ ಸಾವಿರ ದೇವಾಲಯಗಳ ಸ್ವಚ್ಚತೆ ಮಾಡಲಾಗಿದ್ದು ಅಲ್ಲದೇ, ರಾಜ್ಯದ ಮಠ, ಮಂದಿರ, ಚರ್ಚ್, ಮಸೀದಿಗಳಿಗೆ ಅನುದಾನ, ಸಮುದಾಯ ಭವನಗಳಿಗೆ ಅನುದಾನ, ಹಾಲಿನ ಡೈರಿಗಳ ನಿರ್ಮಾಣಕ್ಕೆ ಅನುದಾನ ಇವುಗಳೊಂದಿಗೆ ಶಿವನಿಗೆ ಪ್ರಿಯವಾದ ಹಿಂದೂ ರುದ್ರಭೂಮಿಯ ಸ್ಥಾಪನೆ ಹಾಗೂ ಸ್ವಚ್ಛತೆಗೆ ಪಣತೊಟ್ಟು ರಾಜ್ಯದಲ್ಲಿ ಇದುವರೆಗೂ ೪೨ ರುದ್ರ ಭೂಮಿಗಳನ್ನು ಪುನಶ್ಚೇತನಗೊಳಿಸಿದ್ದಾರೆ. ಒಟ್ಟಿನಲ್ಲಿ ಧರ್ಮಸ್ಥಳ ಮಂಜುನಾಥಸ್ವಾಮಿಗೆ ಭಕ್ತರು ಬೊಗಸೆ ತುಂಬಾ ಕೊಟ್ಟದ್ದನ್ನು ಮಂಜುನಾಥಸ್ವಾಮಿಯ ಪ್ರೇರಣೆಯಿಂದ ರಾಜ್ಯದ ಜನಸಾಮಾನ್ಯರ ಬಡಜನತೆಯ ಏಳ್ಗೆ ಹಾಗೂ ಒಳಿತಿಗೆ ಶ್ರಮಿಸಲು ಪ್ರಾರಂಭಿಸಿ ಅರ್ಧ ಶತಮಾನವೇ ಕಳೆದಿದೆ. ಈ ಸೇವೆಗಳಿಗೆ ಮೆಚ್ಚಿ ಪೂಜ್ಯರಿಗೆ ಸರ್ಕಾರದ ವತಿಯಿಂದ ಅನೇಕ ಸರ್ವೋನ್ನತ ಪ್ರಶಸ್ತಿಗಳು ಲಭಿಸಿವೆ. ಮಿಗಿಲಾಗಿ ಹೆಗ್ಗಡೆಯವರು ಬಡವರಲ್ಲಿ ಭಗವಂತನನ್ನು ಕಂಡು ಸದಾ ಅವರ ಸೇವೆಗೆ ತಮ್ಮನ್ನು ತಾವು ಸರ್ಪಿಸಿಕೊಂಡಿದ್ದು ಕನಸು ಮನಸಿನಲ್ಲೂ ಯಾರಿಗೂ ಕೆಡಕನ್ನು ಬಯಸದೇ ತಮ್ಮನ್ನು, ತಮ್ಮ ಕುಟುಂಬವನ್ನು ಹಾಗೂ ಸಂಸ್ಥೆಯನ್ನೂ ಸದಾ ಬಡವರ ಸೇವೆಗಾಗಿ ಸನ್ನದ್ದರಾಗಿದ್ದಾರೆ ಎಂದರು.
ಚಿಕ್ಕಹೊನ್ನವಳ್ಳಿ ಗ್ರಾಮ ದೇವತೆ ಚೌಡಶ್ವರಿ ದೇವಿಯ ದೇವಸ್ಥಾನದಲ್ಲಿ ವೀರೇಂದ್ರ ಹೆಗ್ಗಡೆಯವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಅಶೋಕ್‌ಕುಮಾರ್, ಒಕ್ಕೂಟ ಅದ್ಯಕ್ಷೆ ವೀಣಾ, ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಕೃಷಿ ಅಧಿಕಾರಿ ಹಾಗೂ ವಲಯ ಮೇಲ್ವಿಚಾರಕ ಪ್ರಮೋದ್ ಕುಮಾರ್, ಸೇವಾ ಪ್ರತಿನಿಧಿ ಮಮತ, ಸ್ವ-ಸಹಾಯ ಸಂಘದ ಪಾಲುದಾರ ಬಂಧುಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

































