Home ಜಿಲ್ಲೆ ಕಲಬುರಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಬಾಕಿ ಕೆಲಸಗಳನ್ನು ಪೂರ್ಣಗೊಳಿಸಿ, ನಿಗದಿತ ಗುರಿ...

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಬಾಕಿ ಕೆಲಸಗಳನ್ನು ಪೂರ್ಣಗೊಳಿಸಿ, ನಿಗದಿತ ಗುರಿ ಸಾಧನೆಗೆ ಆದ್ಯತೆ ನೀಡಿ: ಗಣಪತಿ ಮಾಳಂಜಿ

ಚಿಂಚೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಅಂಬೇಡ್ಕರ್ ಭವನದಲ್ಲಿ ದ್ವಿತೀಯ ತ್ರೈಮಾಸಿಕದ ತಾಲೂಕು ಮಟ್ಟದ ಸೇವಾ ಪ್ರತಿನಿಧಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ಸಭೆಯು ಧ್ಯೇಯಗೀತೆ ಹಾಗೂ ದೇವರ ಗೀತೆಯೊಂದಿಗೆ ಆರಂಭವಾಯಿತು. ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ ಅವರು ದೀಪ ಪ್ರಜ್ವಲಿಸುವ ಮೂಲಕ ಸಭೆಗೆ ಚಾಲನೆ ನೀಡಿದರು.
ಯೋಜನಾಧಿಕಾರಿ ಕೇಶವ ಡಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದ್ವಿತೀಯ ತ್ರೈಮಾಸಿಕದಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವ ಕುರಿತು ಮಾಹಿತಿ ನೀಡಿದರು. ಕಂತು ಬಾಕಿ ವಸೂಲಿ, ನಿರಂತರ ಪತ್ರಿಕೆ, ಪ್ರಗತಿನಿಧಿ ವಿತರಣೆ, ಸುಜ್ಞಾನನಿಧಿ ಶಿಷ್ಯವೇತನ, ದೂರವಾಣಿ ಸಂಖ್ಯೆ ನವೀಕರಣ, ಪಾನ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ ನವೀಕರಣ ಮತ್ತು ಕುಟುಂಬದ ಸದಸ್ಯರ ವಿವರಗಳನ್ನು ವ್ಯವಸ್ಥೆಯಲ್ಲಿ ದಾಖಲಿಸುವ ಕಾರ್ಯಗಳ ಕುರಿತು ವಿವರಿಸಿದರು.
ನಂತರ ಮಾತನಾಡಿದ ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ ಅವರು, ಹಿಂದಿನ ಸಭೆಯಲ್ಲಿ ಸೇವಾ ಪ್ರತಿನಿಧಿಗಳಿಗೆ ನೀಡಲಾಗಿದ್ದ ಗುರಿಗಳ ಸಾಧನೆಯ ಕುರಿತು ಪರಿಶೀಲನೆ ನಡೆಸಿದರು. ಸೇವಾ ಪ್ರತಿನಿಧಿಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ, ಸೂಕ್ತ ಉದಾಹರಣೆಗಳ ಮೂಲಕ ನಿಗದಿತ ಗುರಿಗಳನ್ನು ಪರಿಣಾಮಕಾರಿಯಾಗಿ ಸಾಧಿಸುವ ವಿಧಾನಗಳ ಕುರಿತು ಮಾರ್ಗದರ್ಶನ ನೀಡಿದರು.
ತಾಲೂಕಿನ ವಿವಿಧ ವಲಯಗಳ ಸೇವಾ ಪ್ರತಿನಿಧಿಗಳೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿ, ಮುಂದಿನ ಒಂದು ತಿಂಗಳಲ್ಲಿ ಪೂರ್ಣಗೊಳಿಸಬೇಕಾದ ಗುರಿಗಳ ಕುರಿತು ವಿಮರ್ಶೆ ನಡೆಸಿದರು. ನಿಗದಿತ ಗುರಿಗಳನ್ನು ಸಾಧಿಸಲು ಸೇವಾ ಪ್ರತಿನಿಧಿಗಳಿಗೆ ಪೆÇ್ರೀತ್ಸಾಹ ಹಾಗೂ ಮಾರ್ಗದರ್ಶನ ನೀಡಿದರು.
ದ್ವಿತೀಯ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ಮಾಡಿದ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳನ್ನು ಗುರುತಿಸಿ ಬಹುಮಾನ ವಿತರಿಸಲಾಯಿತು. ಈ ಮೂಲಕ ಮುಂದಿನ ಅವಧಿಯಲ್ಲಿಯೂ ಉತ್ತಮ ಕಾರ್ಯನಿರ್ವಹಣೆ ಹಾಗೂ ಗುರಿ ಸಾಧನೆಗೆ ಪ್ರೇರಣೆ ನೀಡಲಾಯಿತು.
ಕೃಷಿ ಮೇಲ್ವಿಚಾರಕ ಸತೀಶ್ ಕೆ.ಎಚ್. ಅವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಮೇಲ್ವಿಚಾರಕ ಆಂಜನೇಯ ಅವರು ವಂದಿಸಿದರು.
ಸಭೆಯಲ್ಲಿ ತಾಲೂಕಿನ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿ, ಕಚೇರಿ ಪ್ರಬಂಧಕರು, ಕಚೇರಿ ಸಿಬ್ಬಂದಿ ಹಾಗೂ ತಾಲೂಕಿನ ಎಲ್ಲ ವಲಯಗಳ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.