
ಕೊರಟಗೆರೆ, ಫೆ. ೯- ದುಡಿಯಲು ಶಕ್ತಿ ಇಲ್ಲದೆ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿರುವ ಅಶಕ್ತರಿಗೆ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತದೆ ಎಂದು ತಾಲ್ಲೂಕು ಯೋಜನಾಧಿಕಾರಿ ಅನಿತಾ ಹೇಳಿದರು.
ತಾಲ್ಲೂಕಿನ ಕಸಬಾ ಹೋಬಳಿ ಬೋಡಬಂಡೇನಹಳ್ಳಿ ಗ್ರಾಮದ ವಾಸಿ ಬಡ ವೃದ್ಧೆ ಮುನಿರತ್ನಮ್ಮಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ವಾತ್ಸಲ್ಯ ಕಿಟ್ ವಿತರಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಅರ್ಹ ಬಡತನ ರೇಖೆಗಿಂತ ಕಡಿಮೆ ಇರುವವರನ್ನು ಯೋಜನೆಯಿಂದ ಗುರುತಿಸಲಾಗುತ್ತದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಬಡ ವೃದ್ಧೆ ಮುನಿರತ್ನಮ್ಮಗೆ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಗಿದೆ. ಕಟ್ಟ ಕಡೆಯ ಪ್ರಜೆಯು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಕಿಟ್‌ನಲ್ಲಿ ದಿನ ಬಳಕೆಗೆ, ಆರೋಗ್ಯ ಬಳಕೆಗೆ ವಸ್ತುಗಳನ್ನು ವಿತರಿಸಲಾಗಿದೆ ಎಂದರು.
ವೀರೇಂದ್ರ ಹೆಗ್ಗಡೆ ಯವರ ಆಶಯದಂತೆ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಆಶೀರ್ವಾದದಿಂದ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಸಂಸ್ಥೆಯಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ಸ್ವಾವಲಂಬಿ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ವಾತ್ಸಲ್ಯ ಯೋಜನೆ ಅಶಕ್ತರಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ನೇತ್ರಾವತಿ, ವಿಜಯಲಕ್ಷ್ಮೀ, ಬಾನುಪ್ರೀಯ, ನಾಗರತ್ನಮ್ಮ, ರುದ್ರಮ್ಮ, ರೇಣುಕಾ, ಭಾಗ್ಯಶ್ರೀ, ಗಾಯತ್ರಿ, ಸಾವಿತ್ರಮ್ಮ ಮತ್ತಿತರರು ಉಪಸ್ಥಿತರಿದ್ದರು.




























