
ಭಾಲ್ಕಿ-ಜ.20:ಮಾನವನು ಉತ್ತಮ ಸಂಸ್ಕಾರ ಹೊಂದುವ ಮೂಲಕ ಧರ್ಮವನ್ನು ಕಾಪಾಡಬೇಕು. ಸುಖದ ಬದುಕಿಗೆ ಧರ್ಮದಷ್ಟೇ ಧನವು ಮುಖ್ಯ. ಇವೆರಡನ್ನೂ ಸಂಪಾದಿಸಿಕೊಂಡು ಬಾಳುವುದೇ ಮನುಷ್ಯ ಜೀವನದ ಪರಮ ಗುರಿಯಾಗಿರಬೇಕೆಂದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ಮೇಹಕರ ಹಿರೇಮಠದ ಶ್ರೀ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ನದಿಯ ನೀರನ್ನು ಎಷ್ಟು ತುಂಬಿದರೂ ಅದು ಹೇಗೆ ಖಾಲಿಯಾಗುವುದಿಲ್ಲವೋ ಹಾಗೆಯೇ ಧರ್ಮದ ಅರಿವನ್ನು ಎಷ್ಟು ಅರಿತರೂ ಕಡಿಮೆಯಾಗುವುದಿಲ್ಲ. ಜಗತ್ತನ್ನು ನೋಡುವ ಕಣ್ಣುಗಳಿಂದ ನಮ್ಮ ಮುಖ ನೋಡಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ನಮ್ಮ ಮುಖ ನೋಡಲು ಕನ್ನಡಿಯ ಅವಶ್ಯಕತೆಯಿದೆ. ಅರಿವು ಜಾಗೃತಗೊಳ್ಳಲು ಮತ್ತು ಆಧ್ಯಾತ್ಮ ಜ್ಞಾನ ವಿಕಾಸಗೊಳ್ಳಲು ಶ್ರೀ ಗುರುವಿನ ಮಾರ್ಗದರ್ಶನದ ಅವಶ್ಯಕತೆಯಿದೆ. ಬದುಕು ನೂರೆಂಟು ಕಷ್ಟಗಳ ಸರಮಾಲೆ. ನಾವೆಷ್ಟೇ ಸುಖವಾಗಿ ಇದ್ದೇವೆ ಅಂದುಕೊಂಡರೂ ಒಂದಿಲ್ಲ ಒಂದು ಕೊರತೆ ಜೀವನದಲ್ಲಿ ಬಂದೇ ಬರುತ್ತದೆ. ಅರಿತು ನಡೆದಾಗ ಬದುಕು ಹಸನಾಗುವುದು. ಮರೆತು ನಡೆದಾಗ ಜೀವನ ಬಂಧನಕಾರಿಯಾಗುತ್ತದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಎಚ್ಚರಿಸಿದ್ದಾರೆ. ಬೆಳೆಯುತ್ತಿರುವ ಯುವ ಜನಾಂಗಕ್ಕೆ ಯೋಗ್ಯ ಅರಿವು-ಸಂಸ್ಕಾರ ತುಂಬಿದರೆ ಅವರು ದೇಶದ ಬಹು ದೊಡ್ಡ ಆಸ್ತಿಯಾಗಬಲ್ಲರು. ಶಿಕ್ಷಣದಿಂದ ಬುದ್ಧಿ ಶಕ್ತಿ ವಿಕಾಸಗೊಂಡರೆ ಧರ್ಮದಿಂದ ಭಾವನೆಗಳು ವಿಕಾಸಗೊಳ್ಳಲು ಸಾಧ್ಯವಾಗುವುದು. ಬದುಕಿ ಬಾಳುವ ಮನುಷ್ಯನಿಗೆ ಬುದ್ಧಿ ಶಕ್ತಿ ಮತ್ತು ಭಾವನೆಗಳು ಎರಡೂ ಅವಶ್ಯಕವೆಂದರು.
ನೇತೃತ್ವ ವಹಿಸಿದ ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಬಯಕೆ ಇಲ್ಲದ ಬದುಕು ಬದುಕೇ ಅಲ್ಲ. ಬದುಕಿಗೆ ಬಯಕೆಗಳಿದ್ದರೆ ಚೆಂದ. ಆದರೆ ಆ ಬಯಕೆಗಳು ಅತಿಯಾಗಬಾರದು. ಅಪೇಕ್ಷೆಗಳು ಸಮುದಾಯದ ಕಲ್ಯಾಣಕ್ಕೆ ಸಹಕಾರಿಯಾಗಬೇಕು. ನಂಬಿಗೆ ಮೇಲೆ ಜಗತ್ತು ನಿಂತುಕೊಂಡಿದೆ. ನಂಬಿಕೆ ಕಳೆದುಕೊಂಡರೆ ಯಾವ ಸಂಬಂಧಗಳು ಉಳಿಯಲಾರವು. ಪ್ರಾಚೀನವಾದ ಸಂಸ್ಕøತಿಗಳು ಮತ್ತು ಬೆಳೆದು ಬಂದ ಪರಂಪರೆಗಳು ಮಾನವ ಜೀವನದ ಉಜ್ವಲ ಭವಿಷ್ಯಕ್ಕೆ ಕಾರಣವಾಗುತ್ತವೆ ಎಂಬುದನ್ನು ಮರೆಯಬಾರದು ಎಂದರು.
ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತರಿಗೆ ಶುಭ ಹಾರೈಸಿದರು. ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.























