
ಬೀದರ್, ಫೆ. ೨೬: ನಗರದ ಸಿದ್ಧಾರ್ಥ ಕಾಲೇಜು ಆವರಣದಲ್ಲಿ ಭಾರತೀಯ ಬೌದ್ಧ ಮಹಾಸಭೆ ವತಿಯಿಂದ ಆಯೋಜಿಸಲಾದ ಧಮ್ಮ ಪ್ರವಚನ ಕಾರ್ಯಕ್ರಮದ ಮೂರನೇ ದಿನದ ಕಾರ್ಯಕ್ರಮವು ಪೂಜ್ಯ ಭಂತೆ ಧಮ್ಮದೀಪ ಹಾಗೂ ಭಿಕ್ಕು ಸಂಘದ ಸಾನಿಧ್ಯದಲ್ಲಿ ಗುರುವಾರ ನಡೆಯಿತು.
ಈ ಸಂದರ್ಭದಲ್ಲಿ ಖ್ಯಾತ ಝೆನ್ ಕವಿ ಸೋಸಲೆ ಗಂಗಾಧರ್ (ಮೈಸೂರು) ಅವರು ಭಗವಾನ್ ಬುದ್ಧರ ಕರ್ಮ ಸಿದ್ಧಾಂತ ಕುರಿತು ವಿಶ್ಲೇಷಣಾತ್ಮಕವಾಗಿ ಮಾತನಾಡಿದರು. ನಮ್ಮ ಇಡೀ ಜೀವನ ಮಾತ್ರವಲ್ಲದೆ ಭೂಮಿಯ ಮೇಲಿರುವ ಎಲ್ಲಾ ಜೀವಿಗಳ ಬದುಕು ಕಾರ್ಯ-ಕಾರಣ ಮತ್ತು ಪರಿಣಾಮದ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳಿದರು.
ಕರ್ಮಗಳು ಶುದ್ಧವಾಗಿದ್ದರೆ ಅದರ ಪ್ರತಿಫಲವೂ ಉತ್ತಮವಾಗಿರುತ್ತದೆ. ಅದರ ವಿರುದ್ಧವಾಗಿ ಕೆಟ್ಟ ಕರ್ಮಗಳಿಗೆ ಕೆಟ್ಟ ಪರಿಣಾಮಗಳು ಎದುರಾಗುತ್ತವೆ ಎಂದು ಅವರು ವಿವರಿಸಿದರು. ಧಮ್ಮವು ಯಾವುದೇ ಪೂರ್ವಜನ್ಮದ ಕರ್ಮಗಳ ಬಗ್ಗೆ ಅಲ್ಲ, ಪ್ರಸ್ತುತ ಜೀವನದ ಕರ್ಮಗಳು ಮತ್ತು ಅವುಗಳ ಪರಿಣಾಮಗಳ ಬಗ್ಗೆ ಮಾತನಾಡುತ್ತದೆ ಎಂದರು.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ತಮ್ಮ ಗುರು ಬುದ್ಧ ಭಗವಾನರ ಕರ್ಮ ಸಿದ್ಧಾಂತದ ನೆಲೆಗಟ್ಟಿನಲ್ಲಿ ಬದುಕು ಸಾಗಿಸಿದ ಪರಿಣಾಮವೇ ಇಂದು ನಾವು ಸುಖ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು. ಈ ವೇಳೆ ಅವರು ಬಾಬಾಸಾಹೇಬರ ಜೀವನದ ಕರ್ಮ ತತ್ವವನ್ನು ಉದಾಹರಣೆಗಳೊಂದಿಗೆ ವಿವರಿಸಿದರು.
ಮನುಷ್ಯನು ಮನಸ್ಸಿನಲ್ಲಿ ಯಾವ ಆಲೋಚನೆಗಳನ್ನು ಬಿತ್ತುತ್ತಾನೋ ಅದೇ ಕರ್ಮವಾಗಿ ಹೊರಹೊಮ್ಮುತ್ತದೆ. ಆದ್ದರಿಂದ ನಮ್ಮ ಆಲೋಚನೆಗಳು ಶುದ್ಧವಾಗಿರಬೇಕು; ಆಗ ಕರ್ಮ ಶುದ್ಧವಾಗುತ್ತದೆ ಮತ್ತು ಅದರ ಪರಿಣಾಮವೂ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ಮುಂದುವರಿದು, ಬೌದ್ಧರಾಗಿರುವ ನಾವು ಬುದ್ಧರ ಬೋಧನೆಗಳನ್ನು ಚಾಚು ತಪ್ಪದೆ ಪಾಲಿಸುವ ಜವಾಬ್ದಾರಿ ಹೊಂದಿದ್ದೇವೆ ಎಂದು ಅವರು ಕರೆ ನೀಡಿದರು.



























