Home ಜಿಲ್ಲೆ ಕಲ್ಲೇಶ್ವರ ಶಾಲೆಯಲ್ಲಿ ಭಕ್ತಿಪೂರ್ವಕ ‘ಪಾದ ಪೂಜೆ’ ಹಾಗೂ ‘ಬೀಳ್ಕೊಡುಗೆ’

ಕಲ್ಲೇಶ್ವರ ಶಾಲೆಯಲ್ಲಿ ಭಕ್ತಿಪೂರ್ವಕ ‘ಪಾದ ಪೂಜೆ’ ಹಾಗೂ ‘ಬೀಳ್ಕೊಡುಗೆ’

ಚಡಚಣ:ಫೆ.26: ಶಿಕ್ಷಣ ಎಂಬುದು ಕೇವಲ ಪುಸ್ತಕದ ಬದನೆಯಲ್ಲ, ಅದು ಮಗುವಿನ ವ್ಯಕ್ತಿತ್ವವನ್ನು ರೂಪಿಸುವ ಅಸ್ತ್ರ. ಈ ಮಾತಿಗೆ ಅನ್ವರ್ಥವೆಂಬಂತೆ, ಚಡಚಣದ ಮಾತೋಶ್ರೀ ಅಹಲ್ಯಬಾಯಿ ಹೋಳ್ಕರ್ ವಿದ್ಯಾವರ್ಧಕ ಸಂಘದ (ರಿ) ಶ್ರೀ ಕಲ್ಲೇಶ್ವರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರದಂದು ‘ತಂದೆ-ತಾಯಂದಿರ ಪಾದ ಪೂಜೆ’ ಹಾಗೂ ‘7ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ’ ಸಮಾರಂಭವು ಅತ್ಯಂತ ಸಂಭ್ರಮ ಮತ್ತು ಭಕ್ತಿಯಿಂದ ಜರುಗಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಾವಿನಾಳದ ಚರಂತಿ ಮಠದ ಷ. ಬ್ರ. ಶ್ರೀ ವಿಜಯ ಮಹಾಂತೇಶ್ವರ ಶಿವಾಚಾರ್ಯರು ತಮ್ಮ ಆಶೀರ್ವಚನದಲ್ಲಿ ಸಂಸ್ಕಾರದ ಮಹತ್ವವನ್ನು ಸಾರಿದರು. “ವಿದ್ಯಾರ್ಥಿ ಜೀವನದಲ್ಲಿ ಕೇವಲ ಅಂಕಗಳು ಮುಖ್ಯವಲ್ಲ, ಸಂಸ್ಕಾರ ಅತಿ ಮುಖ್ಯ. ತಂದೆ-ತಾಯಿಯರನ್ನು ಗೌರವಿಸುವ ಗುಣ ಬೆಳೆಸಿಕೊಂಡರೆ ಮಾತ್ರ ಜೀವನದಲ್ಲಿ ಉನ್ನತ ಶಿಖರವನ್ನು ಏರಲು ಸಾಧ್ಯ” ಎಂದು ಅವರು ಮಾರ್ಗದರ್ಶನ ನೀಡಿದರು.

ಮಖಣಾಪುರದ ಗುರು ಪೀಠದ ಪ. ಪೂ. ಶ್ರೀ ಸೋಮೇಶ್ವರ ಮಹಾಸ್ವಾಮೀಜಿ ಅವರು ಮಾತನಾಡಿ, ಶಾಲೆಯು ಹಮ್ಮಿಕೊಂಡಿರುವ ಪಾದ ಪೂಜಾ ಕಾರ್ಯಕ್ರಮವನ್ನು ಶ್ಲಾಘಿಸಿದರು. “ಮಕ್ಕಳು ಶಿಕ್ಷಣದ ಜೊತೆಗೆ ಪೆÇೀಷಕರ ಪಾದ ಪೂಜೆ ಮಾಡುವ ಮೂಲಕ ವಿನಯತೆ ಮತ್ತು ಕೃತಜ್ಞತಾ ಭಾವವನ್ನು ಕಲಿಯುತ್ತಿದ್ದಾರೆ” ಎಂದು ಅವರು ನುಡಿದರು.

ಬ್ರಹ್ಮಕುಮಾರಿ ವಿದ್ಯಾ ಕೇಂದ್ರದ ಗೌರವಾಧ್ಯಕ್ಷರಾದ ಶ್ರೀ ಮಾತೋಶ್ರೀ ರಾಜಯೋಗಿನಿ ಶ್ರೀದೇವಿ ಅಮ್ಮನವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳುತ್ತಾ, “ಮುಂದಿನ ಶಿಕ್ಷಣದತ್ತ ಹೆಜ್ಜೆ ಇಡುವಾಗ ಏಕಾಗ್ರತೆ ಮತ್ತು ದೃಢವಾದ ಆತ್ಮವಿಶ್ವಾಸ ನಿಮ್ಮಲ್ಲಿ ಇರಲಿ” ಎಂದು ಪ್ರೇರೇಪಿಸಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಕೆ. ಎಸ್. ವಾಲಿಕಾರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ಶಾಲೆಯ ಪ್ರಗತಿಯಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಸ್ಮರಿಸಿ, ಪ್ರಾಥಮಿಕ ಶಿಕ್ಷಣ ಮುಗಿಸಿ ಹೊರಹೋಗುತ್ತಿರುವ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು.

ಮಾತೋಶ್ರೀ ಅಹಲ್ಯಬಾಯಿ ಹೋಳ್ಕರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಎಸ್. ಡಿ. ಶಿರನಾಳ ಹಾಗೂ ಸಿ.ಆರ್.ಪಿ ಚಡಚಣದ ಶ್ರೀ ಭೀಮಾಶಂಕರ ವಾಘಮೋರೆ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಕರಾದ ಶ್ರೀ ಸುನೀಲ ಯಳಮೇಲಿ, ಶ್ರೀಮತಿ ಅನ್ನಪೂರ್ಣ ಜಂಗಮಶೆಟ್ಟಿ ಹಾಗೂ ಶ್ರೀಮತಿ ಭುವನೇಶ್ವರಿ ರಾ. ಜಂಗಲಗಿ ಅವರು ವಿದ್ಯಾರ್ಥಿಗಳ ಜೀವನದ ಮುಂದಿನ ಹಾದಿಗೆ ಉಪಯುಕ್ತವಾಗುವಂತಹ ಮಾರ್ಗದರ್ಶನ ನೀಡಿದರು.
ಪತ್ರಕರ್ತರಾದ ಶ್ರೀ ಲಕ್ಷ್ಮಣ ಸಿಂಧೆಯವರು ತಂದೆ ತಾಯಿ ಮತ್ತು ಮಕ್ಕಳ ಬಾಂಧವ್ಯದ ಕುರಿತು ಮಾತನಾಡಿದರು
ಈ ಕಾರ್ಯಕ್ರಮದಲ್ಲಿ ಶ್ರೀ ಎಂ ಎಸ್ ಕಾಮಗೊಂಡ ಸರ್ ನಿರೂಪಣೆಯನ್ನು ಮಾಡಿದರು
ಮುಖ್ಯ ಗುರುಗಳಾದ ಶ್ರೀ ಡಿ ಎಸ್ ಅಜಮನಿ ಸರ್ ಸ್ವಾಗತಿಸಿದರು ಹಾಗೂ
ಶ್ರೀ ಜೆ ಸಿ ಬಿರಾದಾರ ಸರ್ ವಂದಿಸಿದರು
ಇದೇ ಸಂದರ್ಭದಲ್ಲಿ ಪಾಲಕರು, ಮುದ್ದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಜರಿದ್ದರು.