ಮುಕ್ಕೋಟಿ ದ್ವಾದಶಿ ಮಹೋತ್ಸವಕ್ಕೆ ಮೋತಕಪಲ್ಲಿಯಲ್ಲಿ ಭಕ್ತಿಸಂಭ್ರಮ

ಕಲಬುರಗಿ,ಜ.1:ಜಿಲ್ಲೆಯ ಸೇಡಂ ತಾಲೂಕಿನ, ಮೋತಕಪಲ್ಲಿಯಲ್ಲಿರುವ ಪುಣ್ಯಕ್ಷೇತ್ರ ಶ್ರೀ ಬಲಭೀಮಸೇನ ದೇವಸ್ಥಾನವು, ಮುಕ್ಕೋಟಿ ದ್ವಾದಶಿಯ ಪವಿತ್ರ ಸಂದರ್ಭದ ನಿಮಿತ್ತ, ಭಕ್ತಿಸಂಭ್ರಮದ ವಾತಾವರಣದಲ್ಲಿ ಮಿಂದೆದ್ದಿತು. ಶ್ರೀ ಬಲ ಭೀಮಸೇನ ದೇವರ ಮುಕ್ಕೋಟಿ ದ್ವಾದಶಿ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲಾಯಿತು.
ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ದೈವಿಕ ಕಾರ್ಯಕ್ರಮಗಳು ಆರಂಭಗೊಂಡವು. ಶ್ರೀ ಬಲ ಭೀಮಸೇನ ದೇವರಿಗೆ ಪಂಚಾಮೃತ ಅಭಿಷೇಕವನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು. ನಂತರ, ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಗುರುಗಳ ಅಷ್ಟೋತ್ತರ ಶತನಾಮ ಪಾರಾಯಣವು ಭಕ್ತರ ಮನಸ್ಸಿನಲ್ಲಿ ಆಧ್ಯಾತ್ಮಿಕ ಅನುಭೂತಿಯನ್ನು ತುಂಬಿತು.
ಪ್ರತಿ ವರ್ಷದಂತೆ, ಈ ವರ್ಷವೂ ಶ್ರೀ ಬಲಭೀಮಸೇನ ದೇವಸ್ಥಾನದಲ್ಲಿ ಅಭಿಷೇಕ, ಅಲಂಕಾರ, ಮಂಗಳಾರತಿ, ಮತ್ತು ಪಲ್ಲಕ್ಕಿ ಸೇವೆ ಮುಂತಾದ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಗ್ರಾಮಸ್ಥರು, ದೇವಸ್ಥಾನದ ಅರ್ಚಕರು, ಸಹಾಯಕ ಅರ್ಚಕರು, ಮತ್ತು ವಿಶೇಷವಾಗಿ ಕುಲಕರ್ಣಿ ಮನೆತನದವರು ದೇವರಿಗೆ ಮಹಾ ನೈವೇದ್ಯವನ್ನು ಸಮರ್ಪಿಸಿದರು. ನಂತರ, ಭಕ್ತರಿಗೆ ಹುಗ್ಗಿ ಮತ್ತು ಪೆÇಂಗಲ್ ಪ್ರಸಾದವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ, ಕಲಬುರಗಿ ಜಿಲ್ಲೆಯ ಶ್ರೀ ಯೋಗೇಶ್ವರ ಯಾಜ್ಞವಲ್ಕ್ಯ ಸಂಸ್ಥೆಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ದೇವರ ದರ್ಶನ ಪಡೆದು, ತೀರ್ಥಪ್ರಸಾದವನ್ನು ಸ್ವೀಕರಿಸಿ ಪುನೀತರಾದರು.