Home ಜಿಲ್ಲೆ ಮಠದ ಸದ್ವಿಕಾಸಕ್ಕೆ ಭಕ್ತರೇ ಬುನಾದಿ :ಹಾರಕೂಡ ಶ್ರೀ

ಮಠದ ಸದ್ವಿಕಾಸಕ್ಕೆ ಭಕ್ತರೇ ಬುನಾದಿ :ಹಾರಕೂಡ ಶ್ರೀ

ಬೀದರ್: ಹಾರಕೂಡದ ಲಿಂಗೈಕ್ಯ ಚೆನ್ನಬಸವ ಶಿವಯೋಗಿಗಳ ಮಠದ ಪರಂಪರೆ ಹಾಗೂ ನಮ್ಮ ಮೇಲೆ ಲಕ್ಷಾಂತರ ಭಕ್ತರು ಇಟ್ಟಿರುವ ಭಕ್ತಿ ಶ್ರದ್ಧೆಯಿಂದಾಗಿ ಹಾರಕೂಡ ಶ್ರೀಮಠ ಸದ್ವಿಕಾಸ ಹೊಂದಿ ಉತ್ತುಂಗ ಶ್ರೇಣಿಯ ದಾಸೋಹ ಹಾಗೂ ಆಧ್ಯಾತ್ಮಿಕ ತಾಣವಾಗಿ ಕಾಣಲು ಸಾಧ್ಯವಾಗಿದೆ ಎಂದು ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಭಕ್ತರಿಂದ ಆಯೋಜಿಸಿದ ಗುರು ವಂದನೆ ಸಮಾರಂಭದಲ್ಲಿ, ಇಲ್ಲಿಯವರೆಗೆ ಒಂದು ಸಾವಿರ ಒಂದನೇ ತುಲಾಭಾರ ಸೇವೆ ಸ್ವೀಕರಿಸಿದ ಐತಿಹಾಸಿಕ ಅಮೃತಗಳಿಗೆಯಲ್ಲಿ ದಿವ್ಯ ವಾಣಿ ಕರುಣಿಸಿದ ಶ್ರೀಗಳು, ಸಾವಿರ ತುಲಾಭಾರ ಸೇವೆ ಸಮರ್ಪಿಸಿರುವುದು, ಹಾರಕೂಡ ಮಠದ ಭಕ್ತರ ಅಚಲವಾದ ಗುರುಭಕ್ತಿಗೆ ಐತಿಹಾಸಿಕ ನಿದರ್ಶನವೆಂದು ಹೇಳಲು ನಮಗೆ ಖುಷಿ ಎನಿಸುತ್ತಿದೆ.
ತುಲಾಭಾರ ಸೇವೆಯಿಂದ ಅರ್ಪಿಸಿದ ದೇಣಿಗೆಯ ಹಣವನ್ನು ಬಡ, ದೀನ ದಲಿತ ಮಕ್ಕಳ ಶಿಕ್ಷಣಕ್ಕಾಗಿ ಬಳಸಲ್ಪಡುತ್ತದೆ ಎಂದು ಹೇಳಿದ ಶ್ರೀಗಳು ತುಲಾಭಾರ ಸೇವೆ ನೆರವೇರಿಸಿದ ಹಾಗೂ ಸರ್ವಭಕ್ತರ ಬಾಳು ಶುಭ ಹಾಗೂ ಶ್ರೇಯಸ್ಸಿನಿಂದ ಕೂಡಿರಲಿ ಎಂದು ಹಾರೈಸಿದರು.
ಸಿದ್ರಾಮಪ್ಪ ದೇಗಾಂವ, ಮಲ್ಲಿನಾಥ ಹಿರೇಮಠ ಹಾರಕೂಡ, ಆನಂದರಾವ ಝಳಕೆ, ಸೂರ್ಯಕಾಂತ ಬಿರಾದಾರ, ಮಂಜುನಾಥ ದೇಗಾಂವ, ವಿರಣ್ಣ ಭಿಮಳ್ಳಿ ಕಲಬುರಗಿ, ರಾಕೇಶ ಮಿಣಜಗಿ ರುಕ್ಮಾಪುರ ಸುರಪುರ, ಮಾಣಿಕಪ್ಪಾ ಶಾಂತಪ್ಪ ಮೆಂತೆ ಕಲಬುರಗಿ ಭಾಗವಹಿಸಿದ್ದರು. ಎಸ್.ಎಮ್.ಭಕ್ತ ಕುಂಬಾರ ಸ್ವಾಗತಿಸಿ, ನಿರೂಪಣೆ ಮಾಡಿದರು.
ಕಾರ್ತಿಕ ಸ್ವಾಮಿ ಯಲದುಗುಂಡಿ, ಶರಣಪ್ಪ ಜಮಾದಾರ ಪ್ರಾರ್ಥನೆ ಗೀತೆ ಹಾಡಿದರು.