
ಬೀದರ್: ‘ಪುಸ್ತಕಗಳನ್ನು ಓದುವುದರಿಂದ ಮಾತ್ರ ಸೃಜನಾತ್ಮಕ ಆಲೋಚನೆಗಳು ವೃದ್ಧಿಯಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಆದಷ್ಟು ಮೊಬೈಲ್ನಿಂದ ದೂರವಿದ್ದು, ಉತ್ತಮ ಪುಸ್ತಕಗಳನ್ನು ಓದುವ ಗೀಳು ಬೆಳೆಸಿಕೊಳ್ಳಬೇಕು’ ಎಂದು ಭಾರತೀಯ ಚಿತ್ರರಂಗದಲ್ಲಿ ನಟಿಸುವ ಬ್ರಿಟಿಷ್ ನಟ ಬೆನೆಡಿಕ್ಟ್ ಗ್ಯಾರೆಟ್ ಸಲಹೆ ಮಾಡಿದರು.
ನಗರದ ಮಾಮನಕೇರಿಯಲ್ಲಿರುವ ಜ್ಞಾನಸುಧಾ ವಿದ್ಯಾಲಯದ ಜ್ಞಾನರಂಗ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ ‘ಜಿಎಸ್ವಿ ಲಿಟ್-ಫೆಸ್ಟ್’ (‘ಜಿಎಸ್ವಿ ಸಾಹಿತ್ಯೋತ್ಸವ’) ಅಂತಿಮ ಸ್ಪರ್ಧೆಗೆ ಕವನವೊಂದನ್ನು ವಾಚನ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
‘ಉತ್ತಮ ಪುಸ್ತಕಗಳಲ್ಲಿ ಸ್ಪೂರ್ತಿದಾಯಕ ಸಂದೇಶಗಳು ಇರುತ್ತವೆ. ಅಂತಹ ಪುಸ್ತಕಗಳನ್ನು ಓದುವುದರಿಂದ ಜ್ಞಾನಾರ್ಜನೆಯೊಂದಿಗೆ ಜೀವನದ ಮೌಲ್ಯಗಳನ್ನು ಮತ್ತು ಬದುಕುವ ದಾರಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದು’ ಎಂದು ತಿಳಿಸಿದರು.
‘ಪುಸ್ತಕಗಳ ವ್ಯಾಸಂಗ ಮಾಡುವುದರಿಂದ ಹೊಸ ಹೊಸ ವಿಷಯಗಳನ್ನು ಕಲಿಯಬೇಕು ಎಂಬ ಕೂತುಹಲ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಪ್ರಶ್ನಿಸುವ ಮನೋಭಾವ ಸಹ ಬೆಳೆಯುತ್ತದೆ. ಪುಸ್ತಕಗಳನ್ನು ಆಸಕ್ತಿಯಿಂದ ಅಭ್ಯಾಸ ಮಾಡಿದ್ದ ಕಾರಣ ನೆಲ್ಸನ್ ಮಂಡೇಲಾ ಅವರಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಟ ಮಾಡುವ ಮನೋಭಾವ ಬೆಳೆಯಿತು. ನಾವು ವಿದ್ಯಾರ್ಥಿಯಾಗಿದ್ದಾಗ ನಮಗೆ ಬೇಕಾಗಿದ್ದ ಪುಸ್ತಕಗಳು ಅಷ್ಟು ಸರಳವಾಗಿ ಲಭ್ಯವಾಗುತ್ತಿದ್ದಿಲ್ಲ. ಆದರೆ ಇಂದಿನ ಆಧುನಿಕ ಯುಗದಲ್ಲಿ ಪುಸ್ತಕಗಳು ಬಹಳ ಸರಳವಾಗಿ ಪಡೆಯಬಹುದು. ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೋಗುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಅಲ್ಲಿ ತಮಗೆ ಆಸಕ್ತಿದಾಯಕ ಪುಸಕ್ತಗಳನ್ನು ದೊರೆಯುತ್ತವೆ. ಅವುಗಳನ್ನು ಓದಿ ವಿಷೇಷ ಕೌಶಲವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಬ್ರಿಟಿಷ್ ಆಳ್ವಿಕೆಯ ಪ್ರಭಾವ ಅರಿಯಲು ಭಾರತಕ್ಕೆ ಬಂದೆ : ‘ಭಾರತದಲ್ಲಿ ಬ್ರಿಟಿಷರು ನಡೆಸಿದ್ದ ಆಳ್ವಿಕೆಯ ಪ್ರಭಾವವನ್ನು ಅರಿತುಕೊಳ್ಳುವ ಉದ್ದೇಶದಿಂದ ಭಾರತಕ್ಕೆ ಬಂದೆ. ನಂತರ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಬ್ರಿಟಿಷ್ ನಟನಾಗುವ ಅವಕಾಶ ದೊರೆತವು’ ಎಂದು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಮ್ಮ ಅನಿಸಿಕೆ ಹಂಚಿಕೊAಡರು.
ಬ್ರಿಟನ್ ದೇಶವು ಇಡೀ ಪ್ರಪಂಚದಲ್ಲಿಯೇ ಶ್ರೀಮಂತ ರಾಷ್ಟ್ರವನ್ನಾಗಿಸುವ ಉದ್ದೇಶದಿಂದ ಬ್ರಿಟಿಷರು ಭಾರತಕ್ಕೆ ಬಂದು ಆಳ್ವಿಕೆ ನಡೆಸಿದ್ದರು. ಇಲ್ಲಿನ ಸಾಮಾಗ್ರಿಗಳನ್ನು ದೋಚಿಕೊಂಡು ಬ್ರಿಟನ್ ದೇಶಕ್ಕೆ ಸಾಗಿಸಲು ರೈಲು ಮಾರ್ಗ ಸ್ಥಾಪನೆ ಮಾಡಿದ್ದರು. ಬ್ರಿಟಿಷರು ಭಾರತದಲ್ಲಿ ನಡೆಸಿದ್ದ ಸುಮಾರು ೨೦೦ ವರ್ಷಗಳ ಆಳ್ವಿಕೆ ಬಹಳ ದಬ್ಬಾಳಿಕೆಯಿಂದ ಕೂಡಿತ್ತು. ಮೊದಲನೆಯ ಮಹಾಯುದ್ಧದಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ. ನಾನು ಬ್ರಿಟನ್ ದೇಶದ ಗೆಳೆಯರೊಂದಿಗೆ ಮಾತನಾಡುವಾಗ ಬ್ರಿಟಿಷರು ಭಾರತದಲ್ಲಿ ಏನೇನು ತಪ್ಪು ಮಾಡಿದ್ದಾರೆ. ಯಾವ ರೀತಿ ದಬ್ಬಾಳಿಕೆ ನಡೆಸಿದ್ದರು ಎಂಬ ವಿಷಯ ಕುರಿತು ಮಾತನಾಡುತ್ತೇನೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಪೂರ್ಣಿಮಾ ಜಿ. ಅವರು ಮಾತನಾಡಿ, ‘ಪುಸ್ತಕಗಳಿಗೆ ನಮ್ಮ ಜೀವನವನ್ನು ಬದಲಾಯಿಸುವ ಆಗಾಧವಾದ ಶಕ್ತಿ ಇದೆ. ಹೀಗಾಗಿ ಉನ್ನತ ಮಟ್ಟದಲ್ಲಿ ಸಾಧನೆಗೈದ ಸಾಧಕರ ಆತ್ಮಚರಿತ್ರೆ ಪುಸ್ತಕಗಳು ಮತ್ತು ಜೀವನ ಚರಿತ್ರೆಯ ಪುಸ್ತಕಗಳನ್ನು ಓದಬೇಕು. ಇದರಿಂದ ತಮ್ಮ ಜೀವನದಲ್ಲಿ ಇಟ್ಟುಕೊಂಡ ಗುರಿಯನ್ನು ಸಾಧಿಸಲು ನಿರತರಾದಾಗ ಎದುರಾಗುವ ಅಡ್ಡಿ ಆತಂಕಗಳನ್ನು ಬಗೆಹರಿಸಿಕೊಳ್ಳುವ ಧೈರ್ಯ ಬರುತ್ತದೆ. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪುಸ್ತಕಗಳ ಪಾತ್ರ ಬಹಳ ಪ್ರಮುಖವಾಗಿದೆ’ೆ ಎಂದು ನುಡಿದರು.
ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಸದುದ್ದೇಶದಿಂದ ನಮ್ಮ ವಿದ್ಯಾಲಯದಲ್ಲಿ ಕಳೆದ ಮೂರು ವರ್ಷಗಳಿಂದ ಈ ಸಾಹಿತ್ಯೋತ್ಸವ ಸಮಾರಂಭ ಯಶಸ್ವಿಯಾಗಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳಿಗೆ ಮಾತ್ರ ಸಿಮಿತವಾಗಬಾರದು, ಅವರು ಇತರೆ ಉತ್ತಮ ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಮಾಡಿಕೊಳ್ಳಬೇಕು’ ಎಂದು ಜ್ಞಾನಸುಧಾ ಸಮೂಹ ಸಂಸ್ಥೆಯ ನಿರ್ದೇಶಕರಾದ ಡಾ. ಮುನೇಶ್ವರ ಲಾಖಾ ತಿಳಿಸಿದರು.
ಜ್ಞಾನಸುಧಾ ವಿದ್ಯಾಲಯದ ಪ್ರಾಚಾರ್ಯರಾದ ಸುನೀತಾ ಸ್ವಾಮಿ, ಉಪಪ್ರಾಚಾರ್ಯರಾದ ಕಲ್ಪನಾ ಮೋದಿ, ಮೇಲ್ವಿಚಾರಕರಾದ ರಜನಿ, ಸಾಯಿಗೀತಾ, ವಸಿಮಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸಿದ್ಧಿ ಮತ್ತು ವರ್ಷಾ ನಿರೂಪಿಸಿದರು. ವಿದ್ಯಾರ್ಥಿನಿ ಅಮನ್ ಸ್ವಾಗತಿಸಿದರು. ವಿದ್ಯಾರ್ಥಿನಿ ವೈಷ್ಣವಿ ವಂದಿಸಿದರು.
ಪುಸ್ತಕಗಳ ವಿಶ್ಲೇಷಣೆ ಮಾಡಿ ಗಮನಸೆಳೆದ ವಿದ್ಯಾರ್ಥಿಗಳು
ಜ್ಞಾನಸುಧಾ ವಿದ್ಯಾಲಯದಲ್ಲಿ ಜರುಗಿದ ‘ಜಿಎಸ್ವಿ ಲಿಟ್-ಫೆಸ್ಟ್’ – ೨೬ (‘ಜಿಎಸ್ವಿ ಸಾಹಿತ್ಯೋತ್ಸವ’)ಅಂತಿಮ ಸ್ಪರ್ಧೆಯಲ್ಲಿ ಪಾಲ್ಗೊಂಡ ೧೩ ವಿದ್ಯಾರ್ಥಿಗಳು ತಾವು ಆಯ್ದ ಪುಸ್ತಕಗಳನ್ನು ಅಚ್ಚುಕಟ್ಟಾಗಿ ವಿಶ್ಲೇಷಣೆ ಮಾಡಿ ಎಲ್ಲರ ಗಮನಸೆಳೆದರು.
ಎರಡು ವಿಭಾಗದಲ್ಲಿ ಜರುಗಲಿರುವ ಅಂತಿಮ ಸ್ಪರ್ಧೆಯಲ್ಲಿ ಪ್ರೌಢ ಶಾಲೆ ವಿಭಾಗದ ಅಂತಿಮ ಸ್ಪರ್ಧೆಯಲ್ಲಿ ೮ ವಿದ್ಯಾರ್ಥಿಗಳು ಹಾಗೂ ಹಿರಿಯ ಪ್ರಾಥಮಿಕ ವಿಭಾಗದ ಸ್ಪರ್ಧೆಗೆ ೭ ವಿದ್ಯಾರ್ಥಿಗಳು ತಾವು ಓದಿ, ಅರ್ಥೈಯಿಸಿಕೊಂಡ ಪುಸ್ತಕಗಳ ಮೌಲ್ಯವನ್ನು ತಮ್ಮದೇ ಆದ ಅನಿಸಿಕೆಯೊಂದಿಗೆ ವಿವರಣೆ ನೀಡಿದರು.
‘ವೈ ಐ ಆಮ್ ಆನ್ ಅಥೀಯಿಸ್ಟ್’, ‘ದಿ ಕೈಟ್ ರನ್ನರ್’, ‘ದ ಡೈರಿ ಆಫ್ ಆ ಯಂಗ್ ಗರ್ಲ್’, ‘ವಿಂಗ್ಸ್ ಆಫ್ ಫೈರ್’, ‘ಅನಿಮಲ್ ಫಾರ್ಮ್’, ‘ಸ್ವಾಮಿ ಆಂಡ್ ಹಿಸ್ ಪ್ರೆಂಡ್ಸ್’, ‘ಇಮ್ಯುನಿ’, ‘ರಾಣಿ ಲಕ್ಷ್ಮಿ ಬಾಯಿ’, ‘ಇಂಡಿಯಾ ಇನ್ ಸ್ಪೆಸ್ಸ್’, ‘ಜವಾಹರಲಾಲ್ ನೆಹರು’, ‘ಮಂಗಲ್ ಪಾಂಡೆ’ ಮತ್ತಿತರ ಪುಸ್ತಕಗಳನ್ನು ವಿಶ್ಲೇಷಣೆ ಮಾಡಿದರು.
ಪ್ರೌಢ ಶಾಲೆ ವಿಭಾಗದ ಅಂತಿಮ ಸ್ಪರ್ಧೆಯಲ್ಲಿ ೮ನೇ ತರಗತಿ ವಿದ್ಯಾರ್ಥಿನಿ ಐಶ್ವರ್ಯ ನವನಾಥ್ ಪ್ರಥಮ ಬಹುಮಾನ, ೯ನೇ ತರಗತಿ ವಿದ್ಯಾರ್ಥಿನಿ ಸೃಷ್ಟಿ ವೀರೇಂದ್ರ ದ್ವಿತೀಯ ಬಹುಮಾನ ಹಾಗೂ ೯ನೇ ತರಗತಿ ವಿದ್ಯಾರ್ಥಿನಿ ಹರ್ಷಿತಾ ಭೀಮಣ್ಣ ತೃತೀಯ ಬಹುಮಾನ ಪಡೆದರೆ, ೯ನೇ ತರಗತಿ ವಿದ್ಯಾರ್ಥಿನಿ ಸಾಯಿಶ್ರದ್ಧಾ ಅಶೋಕ ಸಮಧಾನಕರ ಬಹುಮಾನ ಪಡೆದರು. ಹಿರಿಯ ಪ್ರಾಥಮಿಕ ವಿಭಾಗದ ಸ್ಪರ್ಧೆಯಲ್ಲಿ ೭ನೇ ತರಗತಿ ವಿದ್ಯಾರ್ಥಿ ಪಿಯೂಶ್ ಮಲ್ಲಿಕಾರ್ಜುನ ಪ್ರಥಮ ಬಹುಮಾನ, ೬ನೇ ತರಗತಿ ವಿದ್ಯಾರ್ಥಿ ಸಿದ್ಧಗಂಗಾ ಉಮೇಶ್ ದ್ವಿತೀಯಾ ಬಹುಮಾನ, ೫ನೇ ತರಗತಿ ವಿದ್ಯಾರ್ಥಿ ಎಂ.ಡಿ. ಅರ್ಷದ್ ರಿಯಾಜ್ ತೃತೀಯ ಬಹುಮಾನ ತಮ್ಮದಾಗಿಸಿಕೊಂಡರು. ೬ನೇ ತರಗತಿ ವಿದ್ಯಾರ್ಥಿ ಶ್ರೇಯನ್ ಸಚೀನ್ ಸಮಧಾನಕರ ಬಹುಮಾನ ಪಡೆದರು.
ವಿದ್ಯಾಲಯದ ಆವರಣದಲ್ಲಿ ಸಪ್ನಾ ಬುಕ್ ಹೌಸ್ ಮತ್ತು ಭಾವಿಕಟ್ಟಿ ಪಬ್ಲಿಷರ್ಸ್ ವತಿಯಿಂದ ಸ್ಥಾಪಿಸಲಾಗಿದ್ದ ಪುಸ್ತಕ ಮಳಿಗೆಯಲ್ಲಿ ವಿದ್ಯಾಲಯದ ವಿದ್ಯಾರ್ಥಿಗಳು ತಮಗೆ ಇಷ್ಟವಾದ ಪುಸ್ತಕಗಳನ್ನು ಖರೀದಿಸಿದರು.


























