
ಕಲಬುರಗಿ: ಡಿ.1:ಮಾನವ ಹುಟ್ಟುತ್ತಾ ಒಂದೇ ಆಗಿದ್ದು, ಜಾತಿ, ಮತ, ಧರ್ಮಗಳ ಸಂಕೋಲೆಯಲ್ಲಿ ಸಿಲುಕಿ ಆತ ಅಲ್ಪಮಾನವನಾಗುತ್ತಾನೆ. ಇವೆಲ್ಲವುಗಳನ್ನು ಮೀರಿ ಬೆಳೆದು ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಮಾನವ ಮಹಾ ಮಾನವ, ಸಮಾಜಕ್ಕೆ ಮಾದರಿಯ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ರಾಜಸ್ಥಾನ ರಾಜ್ಯದ ಅಜ್ಮೀರದ ಹಜರತ್ ಕ್ವಾಜಾ ಮೊಯಿನೊದ್ದೀನ್ ಹಸನ್ ಚಿಸ್ತಿ ದರ್ಗಾದ ಸೈಯದ್ ಹಮ್ಝಾ ಸಾಹೇಬ್ ಚಿಸ್ತಿ ಅಜ್ಮೀರ ಶರೀಫ್ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿನ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಸಂಜೆ ಜರುಗಿದ ‘ಕೋಮು ಸಾಮರಸ್ಯ ಕಾರ್ಯಕ್ರಮ’ದಲ್ಲಿ ಅವರು ಮಾತನಾಡುತ್ತಿದ್ದರು.
ದೇವನೊಬ್ಬ, ನಾಮ ಹಲವು. ಧರ್ಮದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದ ಮನುಜರು ಮೇಲು-ಕೀಳು ಎಂಬ ಮನೋಭಾವನೆಯನ್ನು ಬೆಳೆಸಿಕೊಂಡಿದ್ದಾರೆ. ಅಜ್ಮೀರದ ದರ್ಗಾಕ್ಕೆ ಎಲ್ಲಾ ಸಮುದಾಯಗಳ ಭಕ್ತರು ಭೇಟಿ ನೀಡುತ್ತಾರೆ. ಅಲ್ಲಿ ಎಲ್ಲರನ್ನು ಸಮಾನವಾಗಿ ಕಾಣಲಾಗುತ್ತದೆ. ದರ್ಗಾವು ಐತಿಹಾಸಿಕವಾಗಿ ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಬಟ್ಟರಗಾ ದರ್ಗಾದ ಸೈಯದ್ ಅಲೀಮ್ ಪೀರ್ಝಾದೆ, ಪ್ರಮುಖರಾದ ಎಚ್.ಬಿ.ಪಾಟೀಲ್, ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್.ಬಿರಾದಾರ, ಓಂಕಾರ ವಠಾರ, ಸೈಯದ್ ಹಮೀದ್, ಇಸ್ಮೈಲ್ ಅತ್ತರ್, ಪೂಜಾ ಹೂಗಾರ, ಕಾವೇರಿ ಹೌದೆ, ಸ್ನೇಹಾ ಚೌಹಾಣ ಹಾಗೂ ವಿದ್ಯಾರ್ಥಿಗಳಿದ್ದರು.

























