ಸ್ಪರ್ಧಾ ಮನೋಭಾವನೆ ಬೆಳೆಸಿಕೊಳ್ಳಿ

ಕಲಬುರಗಿ : ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುರೇಶಕುಮಾರ ನಂದಗಾAವ ಹೇಳಿದರು.
ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯವು ಶುಕ್ರವಾರ ಪೂಜ್ಯ ಡಾ.ಶರಣಬಸವೇಶ್ವರ ಅಪ್ಪ ಅವರ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡ ರಸ ಪ್ರಶ್ನೆ ಮತ್ತು ಚರ್ಚಾ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಂತಹ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಜ್ಞಾನವಿಸ್ತಾರ, ಚಿಂತನೆ ಸಾಮರ್ಥ್ಯ ಮತ್ತು ತರ್ಕಬದ್ಧವಾದ ಅಭಿವ್ಯಕ್ತಿಯನ್ನು ಬೆಳೆಸಿಕೊಳ್ಳಲು ಅವಕಾಶವಿದೆ. ಸಾಮಾನ್ಯ ಜ್ಞಾನ, ತೀಕ್ಷ÷್ಣ ಚಿಂತನಾ ಶಕ್ತಿ, ವಾದ-ಪ್ರತಿವಾದದ ಕಲೆ, ವಿಷಯದ ಆಳವಾದ ಅರಿವು, ಭಾಷಣ ಕಲೆ ಕಲಿಸುತ್ತದೆ. ಪೂಜ್ಯ ಡಾ.ಅಪ್ಪಾ ಅವರು ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಹಗಲಿರುಳು ಚಿಂತಿಸುತ್ತಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ದಶರಥ ಮೇತ್ರೆ ಮಾತನಾಡಿ, ಇಂತಹ ಸ್ಪರ್ಧೆಗಳು ವ್ಯಕ್ತಿತ್ವವನ್ನು ರೂಪಿಸುತ್ತದೆ. ಸೋಲು-ಗೆಲವುಗಳನ್ನೆಲ್ಲ ಮೀರಿಸಿ, ಭಾಗವಹಿಸುವ ಧೈರ್ಯ ಮತ್ತು ಸೃಜನಾತ್ಮಕ ಚಿಂತನೆಗೆ ಹೆಚ್ಚು ಮೌಲ್ಯ ನೀಡುತ್ತವೆ. ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಭಾಗವಹಿಸಬೇಕು ಎಂದರು.
ಚರ್ಚಾ ಸ್ಪರ್ಧೆಯಲ್ಲಿ ಶರಣಬಸವೇಶ್ವರ ಬಿ.ಎಡ್ ಕಾಲೇಜಿನ ವಿನೋದ ಪ್ರಥಮ, ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ದೀಪಿಕಾ ದ್ವಿತೀಯ, ಶರಣಬಸವೇಶ್ವರ ಬಿ.ಎಡ್ ಕಾಲೇಜಿನ ಬಸವರಶ್ಮೀ ತೃತೀಯ ಬಹುಮಾನ ಪಡೆದರೆ, ರಸ ಪ್ರಶ್ನೆ ಸ್ಪರ್ಧೆಯಲ್ಲಿ ಗುರುಕುಲ ಪದವಿ ಮಹಾವಿದ್ಯಾಲಯ ಪ್ರಥಮ, ಸರಕಾರಿ ಮಹಾವಿದ್ಯಾಲಯ(ಸ್ವಾಯತ್ತ) ದ್ವಿತೀಯ, ಡಾ.ಬಿ.ಆರ್.ಅಂಬೇಡ್ಕರ್ ಮಹಾವಿದ್ಯಾಲಯ ತೃತೀಯ ಬಹುಮಾನ ಪಡೆದಿದ್ದಾರೆ.
ವೇದಿಕೆ ಮೇಲೆ ಡಾ.ಇಂದಿರಾ ಶೇಟಕಾರ, ದಯಾನಂದ ಹೊಡಲ್, ವಿಜಯಕುಮಾರ ಸಲಗಾಪೂರ ಇದ್ದರು. ಸ್ಪರ್ಧೆಗಳ ನಿರ್ಣಾಯಕರಾಗಿ ಡಾ.ಬಸವರಾಜ ಶ್ರೀಗಿರಿ, ಡಾ.ರಾಜಶೇಖರ ಭೀರನಳ್ಳಿ ಮತ್ತು ಡಾ.ಮಯೂರ ಕೋಟಿ ಇದ್ದರು. ವಿವಿಧ ಮಹಾವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.