
ಬೆಂಗಳೂರು,ಮೇ.೨೪- ಹಿರಿಯ ನಾಗರಿಕರನ್ನೇ ಗುರಿಯಾಗಿಸಿಕೊಂಡು ಜಾಲ ಹೆಣೆದು ವೃದ್ಧೆಯೊಬ್ಬರಿಗೆ ೨೪ ಕೋಟಿ ರೂ ವಂಚಿಸಿದ ಸೈಬರ್ ಖದೀಮರ ಗ್ಯಾಂಗ್ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗ್ಯಾಂಗ್ ನಲ್ಲಿದ್ದ ಮುಂಬಯಿ ಅಲಹಾಬಾದ್ ಮತ್ತು ದೆಹಲಿ ಮೂಲದ ಗೌರವ್ ಕುಮಾರ್, ಓಂ ಪ್ರಕಾಶ್ ಸೇರಿ ಐವರನ್ನು ಬಂಧಿಸಲಾಗಿದೆ. ಶಿವಾಜಿನಗರ ನಿವಾಸಿ ಲಕ್ಷ್ಮೀ ರಾಮಮೂರ್ತಿ ಈ ಹಿಂದೆ ದುಬೈನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ ನಿವೃತ್ತಿಯಾಗಿದ್ದು,ಬೆಂಗಳೂರು ಮತ್ತು ಮುಂಬೈನಲ್ಲಿ ಇದ್ದ ಆಸ್ತಿಗಳನ್ನು ಮಾರಾಟ ಮಾಡಿ ಅಮೆರಿಕದಲ್ಲಿರುವ ಮಕ್ಕಳ ಜೊತೆ ನೆಲೆಸಲು ಯೋಜನೆ ಮಾಡಿದ್ದರು.
ಇದೇ ಹಣದ ಮೇಲೆ ಕಣ್ಣು ಹಾಕಿದ ಸೈಬರ್ ಖದೀಮರು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವೃದ್ಧೆಗೆ ವಿಡಿಯೋ ಕರೆ ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಮಾಡಿದ್ದೀರ. ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಅಕೌಂಟ್ ಮನಿ ಲ್ಯಾಂಡರಿಂಗ್‌ಗೆ ಬಳಕೆಯಾಗಿದೆ.
ನೀವು ಯಾರ ಜೊತೆಯೂ ಮಾತನಾಡಬಾರದು. ಎಲ್ಲಾ ಹಣವನ್ನು ವೆರಿಫಿಕೇಶನ್‌ಗೆ ಕಳುಹಿಸಿ ಎಂದು ಆರ್.ಟಿ.ಜಿ.ಎಸ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಕಳೆದ ಜನವರಿಯಿಂದ ಮೇ ತಿಂಗಳವರೆಗೆ ನಿರಂತರವಾಗಿ ವೃದ್ಧೆಯನ್ನು ಬೆದರಿಸಿದ್ದ ವಂಚಕರು. ಹಂತ ಹಂತವಾಗಿ ಬರೋಬ್ಬರಿ ೨೪ ಕೋಟಿ ರೂ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
೨೨ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಇಷ್ಟಾದರೂ ತೃಪ್ತಿಯಾಗದ ಖದೀಮರು ಮತ್ತಷ್ಟು ಹಣಕ್ಕಾಗಿ ಒತ್ತಡ ಹಾಕಿದ್ದಾರೆ.
ಚಿನ್ನ ಅಡಮಾನ:
ಇದರಿಂದ ಮನೆಯಲ್ಲಿದ್ದ ಸುಮಾರು ೧ ಕೆಜಿ ೩೦೦ ಗ್ರಾಂ ಚಿನ್ನಾಭರಣವನ್ನು ಅಡಮಾನ ಇಡಲು ಕಂಟೋನ್ಮೆಂಟ್ ಬ್ರಾಂಚ್ ಐಸಿಐಸಿಐ ಬ್ಯಾಂಕ್‌ಗೆ ವೃದ್ಧೆ ಲಕ್ಷ್ಮಿ ಬಂದಿದ್ದರು. ಇಷ್ಟೊಂದು ಪ್ರಮಾಣದ ಚಿನ್ನಾಭರಣ ಗಮನಿಸಿದ ಬ್ಯಾಂಕ್ ಮ್ಯಾನೇಜರ್‌ಗೆ ಅನುಮಾನ ಬಂದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬ್ಯಾಂಕ್‌ಗೆ ದೌಡಾಯಿಸಿದ ಸಿಸಿಬಿ ಸೈಬರ್ ಕ್ರೈಂ ಪೊಲೀಸರು. ವೃದ್ಧೆಯನ್ನು ವಿಚಾರಣೆ ನಡೆಸಿದಾಗ ಮೊದಲಿಗೆ ಏನನ್ನೂ ಹೇಳದ ವೃದ್ಧೆಯು ಬಳಿಕ ತಾವು ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿದ್ದಾಗಿ ಬಾಯ್ದಿಟ್ಟಿದ್ದಾರೆ.
ತಕ್ಷಣವೇ ಕೇಸ್ ದಾಖಲಿಸಿಕೊಂಡ ಸಿಸಿಬಿ ಸೈಬರ್ ಪೊಲೀಸರು ತನಿಖೆಯನ್ನು ಕೈಗೊಂಡು ವೃದ್ಧೆಯನ್ನು ಸಮಾಧಾನಪಡಿಸಿ ವಿಚಾರಿಸಿದಾಗ ಸೈಬರ್ ವಂಚನೆಯ ಅಸಲಿ ಕಥೆ ಹೊರಬಿದ್ದಿದೆ.
೬೦ ಲಕ್ಷ ನಗದು ಜಪ್ತಿ:
ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆಯಿಂದಾಗಿ ವೃದ್ಧೆಯ ಬಳಿ ಇದ್ದ ಉಳಿದ ಹಣ ಹಾಗೂ ಒಡವೆಗಳು ವಂಚಕರ ಪಾಲಾಗುವುದು ತಪ್ಪಿದೆ. ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿ ದೇಶದ ವಿವಿಧ ನಗರಗಳಲ್ಲಿ ಅಡಗಿದ್ದ ಐವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಷ್ಟೇ ಅಲ್ಲದೆ, ವಂಚಕರು ಬಳಸುತ್ತಿದ್ದ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು ೬೦ ಲಕ್ಷ ರೂ ನಗದನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿ ಪ್ರಕರಣ ಸಂಬಂಧ ಈವರೆಗೆ ಸುಮಾರು ೩ ಕೋಟಿ ಹಣ ಇರುವ ಬ್ಯಾಂಕ್ ಅಕೌಂಟ್‌ಗಳನ್ನು ಫ್ರೀಜ್ ಮಾಡಿ ತನಿಖೆ ಮುಂದುವರೆಸಲಾಗಿದೆ.
























