Home ಜಿಲ್ಲೆ ಹದಗೆಟ್ಟ ರಸ್ತೆ: ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿದ ಅಂಬೇಡ್ಕರ್ ಸೇನೆ

ಹದಗೆಟ್ಟ ರಸ್ತೆ: ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿದ ಅಂಬೇಡ್ಕರ್ ಸೇನೆ

ಜಮಖಂಡಿ: ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಹುತಾತ್ಮ ಛಟ್ಯೂಸಿಂಗ್ ಸ್ಮಾರಕದವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ರಸ್ತೆ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಅಂಬೇಡ್ಕರ್ ಸೇನೆ ವತಿಯಿಂದ ಜಮಖಂಡಿ ಉಪವಿಭಾಗಾಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಸೂರಜ ಕುಡ್ರಾಣಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೂರಜ ಕುಡ್ರಾಣಿ ಹಾಗೂ ಅಹಮ್ಮದಕಯಾಮ (ಅಪ್ಪು) ಆಲಗೂರ ಅವರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದ ಪ್ರಮುಖ ರಸ್ತೆಯಾಗಿರುವ ಅಂಬೇಡ್ಕರ್ ವೃತ್ತದಿಂದ ಛಟ್ಯೂಸಿಂಗ್ ಸ್ಮಾರಕದವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ವಾಹನಗಳ ಸಂಚಾರಕ್ಕೆ ಮಾತ್ರವಲ್ಲದೆ, ಪಾದಚಾರಿಗಳ ಓಡಾಟಕ್ಕೂ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಛಟ್ಯೂಸಿಂಗ್ ಸ್ಮಾರಕದಿಂದ ದೇಸಾಯಿ ವೃತ್ತದವರೆಗಿನ ರಸ್ತೆ ಹಾಗೂ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗಿನ ರಸ್ತೆ ಅಭಿವೃದ್ಧಿಯಾಗಿದ್ದರೂ, ಅಂಬೇಡ್ಕರ್ ವೃತ್ತದಿಂದ ಛಟ್ಯೂಸಿಂಗ್ ಸ್ಮಾರಕದವರೆಗಿನ ರಸ್ತೆ ಮಾತ್ರ ಅಭಿವೃದ್ಧಿಯಾಗದಿರುವುದು ಸ್ಥಳೀಯರ ಪ್ರಶ್ನೆಯಾಗಿದೆ ಎಂದರು.

ಹದಗೆಟ್ಟ ರಸ್ತೆಯಿಂದ ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ ರಸ್ತೆ ಕಾಮಗಾರಿ ಕೈಗೊಂಡು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಕಾಮಗಾರಿ ಶೀಘ್ರ ಆರಂಭಿಸದಿದ್ದರೆ ಜಮಖಂಡಿ ನಗರದಲ್ಲಿ ನಡೆಯುತ್ತಿರುವ ಇತರ ಕಾಮಗಾರಿಗಳನ್ನು ಬಂದ್ ಮಾಡಿಸಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು