ನವದೆಹಲಿ,ಸೆ.೨- ಭಾರತದ ಆರ್ಥಿಕತೆ “ಸತ್ತ ಆರ್ಥಿಕತೆ” ಎಂದು ವಾಗ್ದಾಳಿ ನಡೆಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲಿ ಭಾರತ, ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ದೇಶವಾಗಲಿದೆ, ಇದಕ್ಕೆ ಪೂರಕವಾಗಿ ದೇಶದ ಜಿಡಿಪಿ ಶೇ ೭.೮ ರಷ್ಟು ಬೆಳವಣಿಗೆಯೇ ಸಾಕ್ಷಿ ಎಂದಿದ್ದಾರೆ.
ಎಲ್ಲಾ ಉತ್ಪನ್ನಗಳನ್ನು”ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ, ಭಾರತದಲ್ಲಿ ತಯಾರಿಸಲಾಗಿದೆ ಎನ್ನುವ ಮಾತು ಪ್ರಪಂಚದ ಹಲವು ದೇಶಗಳಲ್ಲಿ ಕೇಳಿಬರುವ ಕಾಲ ದೂರವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ನಡೆದ ಸೆಮಿಕಾನ್ ಇಂಡಿಯಾ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾದ “ಆರ್ಥಿಕ ಸ್ವಾರ್ಥದಿಂದ ಉದ್ಭವಿಸಿರುವ ಸವಾಲುಗಳ ಹೊರತಾಗಿಯೂ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇಕಡಾ ೭.೮ ರಷ್ಟು ಬೆಳವಣಿಗೆ ಕಂಡಿದೆ ಎಂದು ಹೇಳಿದ್ದಾರೆ.
ದೇಶದ ಜಿಡಿಪಿ ಬೆಳವಣಿಗೆ “ಪ್ರತಿಯೊಂದು ನಿರೀಕ್ಷೆ ಮತ್ತು ಅಂದಾಜು ಮೀರಿ ಕಾರ್ಯನಿರ್ವಹಿಸಿದೆ. ಭಾರತದ ಉತ್ಪನ್ನಗಳ ಮೇಲೆ ಅಮೆರಿಕಾ ಹೆಚ್ಚುವರಿ ಸುಂಕ ವಿಧಿಸಿದ್ದರೂ ದೇಶದ ಬಲಿಷ್ಠ ಆರ್ಥಿಕತೆಯ ಮುಂದೆ ಯಾವುದೂ ಪ್ರಯೋಜನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.
“ವಿಶ್ವಾದ್ಯಂತ ಆರ್ಥಿಕ ಸಮಸ್ಯೆ, ಮತ್ತು ಆರ್ಥಿಕ ಸ್ವಾರ್ಥದಿಂದ ಉದ್ಭವಿಸುವ ಸವಾಲುಗಳ ನಡುವೆ ಭಾರತ ಶೇಕಡಾ ೭.೮ ರಷ್ಟು ಬೆಳವಣಿಗೆ ಸಾಧಿಸಿರುವುದು ಹೆಮ್ಮೆಯ ಸಂಗತಿ. ಭಾರತದ ಒಟ್ಟು ದೇಶೀಯ ಉತ್ಪನ್ನ ಶೇಕಡಾ ೬.೫ ರ ಅಂದಾಜಿಗೆ ಪ್ರತಿಯಾಗಿ ಶೇಕಡಾ ೭.೮ ರಷ್ಟು ಹೆಚ್ಚಾಗಿದೆ. ಈ ಅಂಕಿ ಅಂಶ ಕಳೆದ ವರ್ಷದ ಇದೇ ಅವಧಿಯಲ್ಲಿನ ಶೇಕಡಾ ೧.೩ ರಷ್ಟು ಹೆಚ್ಚಾಗಿದ್ದು ಇದು ದೇಶದ ಬಳಿಷ್ಠ ಅರ್ಥ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ
ಕಳೆದ ಹಣಕಾಸು ವರ್ಷದಲ್ಲಿ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇಕಡಾ ೬.೫ ರಷ್ಟು ಬೆಳವಣಿಗೆ ಕಂಡಿತ್ತು ಮತ್ತು ೨೦೨೫-೨೦೨೬ ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ ಕಂಡಿದೆ, ಹಿಂದಿನ ಅತ್ಯಧಿಕ ಜಿಡಿಪಿ ಬೆಳವಣಿಗೆ ೨೦೨೪ ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡಾ ೮.೪ ರಷ್ಟು ಇತ್ತು ಎಂದು ಹೇಳಿದ್ದಾರೆ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ಭಾರತದ ಮೇಲೆ ೨೫ ಪ್ರತಿಶತ ಪರಸ್ಪರ ಸುಂಕ ಮತ್ತು ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ದಂಡವಾಗಿ ಹೆಚ್ಚುವರಿ ೨೫ ರಷ್ಟು ವಿಧಿಸಿದ್ದಾರೆ.
ಭಾರತ ಸುಂಕ ಕಡಿತ ಮಾಡಲು ಮುಂದಾಗಿದ್ದು ಇದು ತಡವಾಗಿದೆ,ಇದನ್ನು ಬಹಳ ವರ್ಷಗಳ ಹಿಂದೆಯೇ ಮಾಡಬೇಕಾಗಿತ್ತು ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದು ದೇಶದ ರೈತರು ವ್ಯಾಪಾರಿಗಳ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಅಸಮಂಜಸ,ಅನೀತಿಯ ಭಾಗ
ಭಾರತದ ಉತ್ಪನ್ನಗಳ ಮೇಲೆ ಅಮೇರಿಕಾ ವಿಧಿಸಿರುವ ಸುಂಕಗಳು “ಅನ್ಯಾಯ, ನ್ಯಾಯಸಮ್ಮತವಲ್ಲ ಮತ್ತು ಅಸಮಂಜಸ” ಎಂದು ಭಾರತ ಹೇಳಿದೆ.
“ಅಮೆರಿಕಾ ಇತ್ತೀಚಿನ ದಿನಗಳಲ್ಲಿ ರಷ್ಯಾದಿಂದ ಭಾರತದ ತೈಲ ಆಮದುಗಳನ್ನು ಗುರಿಯಾಗಿಸಿಕೊಂಡಿದೆ. ಆಮದುಗಳು ಮಾರುಕಟ್ಟೆ ಅಂಶಗಳನ್ನು ಆಧರಿಸಿವೆ ಮತ್ತು ಭಾರತದ ೧.೪ ಶತಕೋಟಿ ಜನರ ಇಂಧನ ಸುರಕ್ಷತೆ ಖಚಿತಪಡಿಸಿಕೊಳ್ಳುವ ಒಟ್ಟಾರೆ ಉದ್ದೇಶದಿಂದ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.




























